ವಯನಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳ ಗುಂಪೊಂದು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದೆ.
ನಾಲ್ವರು ಸದಸ್ಯರ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳ ಗುಂಪು ತಳಪ್ಪುಳ ಪೊಲೀಸ್ ಠಾಣೆ ಪ್ರದೇಶಕ್ಕೆ ಒಳಪಟ್ಟ ಕಂಬಮಲ ಪ್ರದೇಶಕ್ಕೆ ಬಂದು ಸ್ಥಳೀಯರಲ್ಲಿ ಚುನಾವಣೆಯನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ.
ಶಂಕಿತ ಮಾವೋವಾದಿಗಳ ಉಪಸ್ಥಿತಿ ಮಾಹಿತಿ ತಿಳಿದ ಕೂಡಲೇ ಕಂಬಮಲ ಪ್ರದೇಶಕ್ಕೆ ಪೊಲೀಸ್ ಸಿಬ್ಬಂದಿ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಮುಂಜಾನೆ 6.15ರ ಸುಮಾರಿಗೆ ಪ್ರದೇಶಕ್ಕೆ ಬಂದ ಮಾವೋವಾದಿಗಳು ಚುನಾವಣೆ ಬಹಿಷ್ಕರಿಸುವಂತೆ ಘೋಷಣೆ ಕೂಗಿದರು. ಯೂನಿಫಾರ್ಮ್ ಧರಿಸಿ, ಬಂದೂಕುಗಳನ್ನು ಹಿಡಿದಿದ್ದ ಮಾವೋವಾದಿಗಳು ಸುಮಾರು 20 ನಿಮಿಷಗಳ ಕಾಲ ಇದ್ದರು ಎಂದು ತಿಳಿಸಿದ್ದಾರೆ.