ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ

Prasthutha|

ಇನಾಯತ್ ಅಲಿ ನೇತೃತ್ವದಲ್ಲಿ ಹರಿದುಬಂದ ಜನಸಾಗರ

- Advertisement -

ಸುರತ್ಕಲ್: ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲು ಒಂದು‌ ದಿನ ಬಾಕಿಯಿರುವಾಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ‌ ರೋಡ್‌ ಶೋ ಮೂಲಕ ಮತಬೇಟೆ ನಡೆಸಿದ್ದಾರೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ಹೊಸಬೆಟ್ಟುನಿಂದ ಬೈಕಂಪಾಡಿವರೆಗೆ ನಡೆದ ರೋಡ್ ಶೋನಲ್ಲಿ ಜನಸಾಗರವೇ ಹರಿದುಬಂದಿದ್ದು, ಸುಮಾರು 10 ಸಾವಿರ ಮಂದಿ ಮೆರವಣಿಗೆಯಲ್ಲಿ ಸಾಗಿ ಶಕ್ತಿ ಪ್ರದರ್ಶನ ನಡೆಸಿದರು.

ತೆರೆದ ವಾಹನದಲ್ಲಿ ನಾಯಕರ ದಂಡು ಸಾಗಿದರೆ, ಸಹಸ್ರಾರು ಕಾರ್ಯಕರ್ತರು‌ ಮತ್ತು ಬೆಂಬಲಿಗರು ಕಾಲ್ನಡಿಗೆಯಲ್ಲಿ ಸಾಗಿಬಂದರು. ಚೆಂಡೆವಾದ್ಯ, ಹುಲಿ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ರೋಡ್ ಶೋ ಮೆರುಗು ಹೆಚ್ಚಿಸಿತ್ತು. ರೋಡ್‌ ಶೋ‌ ಉದ್ದಕ್ಕೂ ಜನರು ಕುಣಿದು ಕುಪ್ಪಳಿಸಿ ಪಟಾಕಿ‌ ಸಿಡಿಸಿ ಸಂಭ್ರಮಿಸಿದರು.

- Advertisement -

ಪದ್ಮರಾಜ್ ಪೂಜಾರಿ ಮತ್ತು ಇನಾಯತ್ ಅಲಿ ಜೋಡಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಕೆಪಿಸಿಸಿ ವಕ್ತಾರೆ ಮತ್ತು ಮೈಸೂರು-ಚಾಮರಾಜನಗರ ಚುನಾವಣಾ ಉಸ್ತುವಾರಿಯಾಗಿರುವ ಯು.ಟಿ. ಫರ್ಝನಾ ಅಶ್ರಫ್, ಮಾಜಿ ಮೇಯರ್ ಮಹಾಬಲ ಮಾರ್ಲ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.‌

ರೋಡ್‌ಶೋ ಬೈಕಂಪಾಡಿ‌ ತಲುಪಿದಾಗ ಕ್ರೇನ್ ಮೂಲಕ‌ ಬೃಹತ್ ಗಾತ್ರದ ಹೂವಿನ ಹಾರ ಹಾಕಿ‌ ಸ್ವಾಗತಿಸಲಾಯಿತು.

ಬೈಕಂಪಾಡಿಯಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಕಾಂಗ್ರೆಸ್ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಈ ಬಾರಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಗೆದ್ದೇ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು. ಇಡೀ‌ ದೇಶದಲ್ಲಿ ಬಿಜೆಪಿ ಸೋಲುವ ಆತಂಕದಲ್ಲಿದೆ, ಆ ಕಾರಣಕ್ಕೆ ಪ್ರಧಾನಿ ಮೋದಿಯವರು ಕೋಮುವಾದದ ಮಾತುಗಳನ್ನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮಾತನಾಡಿ, ಬಿಜೆಪಿ‌ ಹಿಂದುತ್ವ ಎಂದು ಹೇಳಿಕೊಂಡು ಬಡವರು ನತ್ತು ಹಿಂದುಳಿದ ಯುವಕರನ್ನು ಬಲಿ ತಗೊಂಡಿದೆ. ಜಿಲ್ಲೆಯ ಜನರು ಬದಲಾವಣೆ ಬಯಸಿದ್ದು, ಈ ಬಾರಿ ಕಾಂಗ್ರೆಸ್ ಗೆಲ್ಲುವ ಮೂಲಕ ಜಿಲ್ಲೆಯ ಸಾಮರಸ್ಯದ ಗತವೈಭವ ಮರುಸ್ಥಾಪನೆಯಾಗಲಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ನಾವು ಕೂಡ ಹಿಂದುಗಳೇ. ಬಿಜೆಪಿಯವರು ನಮಗೆ ಹಿಂದೂ ಧರ್ಮದ ಬಗ್ಗೆ ಪಾಠ ಮಾಡುವ ಅಗತ್ಯ ಇಲ್ಲ ಎಂದರು.

ಇನಾಯತ್ ಅಲಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮನೆ ಮನೆಗೆ ನೀರು ಕೊಡುವುದಾಗಿ ಭರವಸೆ ನೀಡಿದ್ದಾರೆ, ಅವರು ಚೊಂಬಿನಲ್ಲಿ ನೀರು ಕೊಡುವುದಾ ಎಂದು ಬಿಜೆಪಿ ಅಭ್ಯರ್ಥಿಯನ್ನು ವ್ಯಂಗ್ಯ ಮಾಡಿದರು. ಇದೇ ಸಂದರ್ಭ ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರು ಚೊಂಬು ಪ್ರದರ್ಶನ ಮಾಡಿ ಬಿಜೆಪಿಗೆ ಕುಟುಕಿದರು.



Join Whatsapp