ಬೆಂಗಳೂರು: ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಚಾಟಿ ಹೇಳಿದ್ದಾರೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನಗೆಟ್ಟ ಕಾಂಗ್ರೆಸ್ ತಪ್ಪು ವ್ಯಾಖ್ಯಾನ ಮಾಡಿ ಜಯವೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಅದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ. ಇದೇ ವಿಷಯವನ್ನು ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಪ್ರಸ್ತಾಪಿಸಿ, ‘ನೆಕ್ಸ್ಟ್ ಮಂಡೆ ( ಏಪ್ರಿಲ್ 29) ಸಮ್ ಥಿಂಗ್ ವಿಲ್ ಬಿ ಹ್ಯಾಪನ್’ ಎಂದಾಗ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸಹಮತ ವ್ಯಕ್ತಪಡಿಸಿದ್ದಾರೆ. ಈ ಕೇಸ್ ನಲ್ಲಿ ವಾದ ಮಾಡುವ ಅಗತ್ಯವೇನಿಲ್ಲವೆಂದು ನ್ಯಾಯಾಲಯ ಹೇಳಿದೆ ಎಂದು ಅಶೋಕ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ, ತೊಂದರೆ ನೀಡುತ್ತಿದೆ ಎಂದು ರಾಜ್ಯದ ಪರ ವಕೀಲ ವಾದ ಮಾಡಿಲ್ಲ. ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಿಲ್ಲ. ವಾರದೊಳಗೆ ಬಿಡುಗಡೆ ಮಾಡಿ ಎಂದೂ ಆದೇಶಿಸಿಲ್ಲ ಎಂದು ವಿಪಕ್ಷ ನಾಯಕ ಹೇಳಿದ್ದಾರೆ.