ಚನ್ನಪಟ್ಟಣ: ನಾವು ಮೋದಿ ಅವರನ್ನು ವೈಯಕ್ತಿಕವಾಗಿ ವಿರೋಧಿಸುತ್ತಿಲ್ಲ. ಅವರ ಸಿದ್ಧಾಂತಗಳನ್ನು ವಿರೋಧಿಸುತ್ತಿದ್ದೇವೆ. ನಾವು ಆರೆಸ್ಸೆಸ್‌ನ ಸಿದ್ಧಾಂತದ ವಿರುದ್ಧ ಇದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿಯನ್ನು ಬಿಟ್ಟು ಪ್ರಧಾನಿ ಮೋದಿ ಒಬ್ಬರೇ ರಾಮಮಂದಿರ ಉದ್ಘಾಟನೆಗೆ ಹೋಗುತ್ತಾರೆ. ಹಾಗಾದರೆ ಇವರು ಪೂಜಾರಿಯಾ? ರಾಮಮಂದಿರಕ್ಕೆ ಕಾಂಗ್ರೆಸ್‌ನವರು ಅವಮಾನ ಮಾಡುತ್ತಿಲ್ಲ. ಅಪಮಾನ ಮಾಡುತ್ತಿರುವುದು ಮೋದಿ ಮಾತ್ರ ಎಂದಿದ್ದಾರೆ.
ರಾಷ್ಟ್ರಪತಿ ದ್ರೌಪತಿ ಮುರ್ಮ ದಲಿತ ಮಹಿಳೆ ಎಂಬ ಕಾರಣಕ್ಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಲಿಲ್ಲ. ಅವರನ್ನು ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸಲಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್‌ನವರು ಬರಲಿಲ್ಲ. ದಲಿತರನ್ನು ಯಾವಾಗ ದೇವಾಲಯದ ಒಳಗೆ ಬಿಡುತ್ತಾರೋ, ಅಲ್ಲಿಯವರೆಗೆ ನಾವು ರಾಮಮಂದಿರಕ್ಕೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದೇಶದ ಎಲ್ಲ ಕಡೆ ಬಿಜೆಪಿ ಸೋಲುವ ವಾತಾವರಣ ಇದೆ. ಹಾಗಾಗಿ ಪ್ರಧಾನಿ ಮೋದಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಮ್ಮ ಪ್ರಣಾಳಿಕೆಗಳ ಬಗ್ಗೆ ಮಾತನಾಡುವ ಮೋದಿಯವರು, ಬಹಿರಂಗ ಚರ್ಚೆಗೆ ಬರಲಿ. ನಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಎನ್ನುತ್ತೀರಲ್ಲ, ಚರ್ಚೆಗೆ ಬನ್ನಿ ಎಂದು ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.