ಉ.ಪ್ರದೇಶ: ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ತಮ್ಮ ಭಾಷಣ ವಿವಾದವಾಗುತ್ತಿದ್ದಂತೆಯೇ ಇಂದು ಯೂ ಟರ್ನ್ ಹೊಡೆದಿದ್ದಾರೆ. ಇಂದಿನ ಭಾಷಣದಲ್ಲಿ ಅವರು ತ್ರಿವಳಿ ತಲಾಖ್, ಹಜ್ ಕೋಟಾಗಳನ್ನು ಪ್ರಸ್ತಾಪಿಸುತ್ತಾ ‘ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದ್ದು ಕಂಡುಬಂದಿದೆ.
ನಿನ್ನೆ ರಾಜಸ್ಥಾನದಲ್ಲಿ ಖುದ್ದು ಪ್ರಧಾನಿಯೇ ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ ಮಾಡಿದ್ದು, ಭಾರೀ ಟೀಕೆಗೆ ಗುರಿಯಾಗಿತ್ತು. ಇಂದು ಉತ್ತರ ಪ್ರದೇಶದ ಅಲೀಘಡ್‌ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದೆ, ಕಡಿಮೆ ಹಜ್ ಕೋಟಾದ ಕಾರಣ, ಸಾಕಷ್ಟು ಹೊಡೆದಾಟಗಳು ನಡೆಯುತ್ತಿದ್ದವು. ಲಂಚವು ಅಲ್ಲಿ ಸಾಮಾನ್ಯವಾಗಿತ್ತು ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಹಜ್‌ಗೆ ಹೋಗಲು ಅವಕಾಶವಿತ್ತು. ಆದರೆ, ಇಂದು ಭಾರತದಲ್ಲಿನ ಹಜ್ ಕೋಟಾವನ್ನು ಹೆಚ್ಚಿಸುವಂತೆ ನಾನು ಸೌದಿ ಅರೇಬಿಯಾದ ಯುವರಾಜನಿಗೆ ಮನವಿ ಮಾಡಿದ್ದೆ. ಸಂಬಂಧಿಸಿದ ವೀಸಾ ನಿಯಮಗಳನ್ನು ಕೂಡ ನಮ್ಮ ಸರ್ಕಾರವು ಮುಸ್ಲಿಮರಿಗೆ ಸುಲಭಗೊಳಿಸಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮೋದಿ, ಈ ಹಿಂದೆ ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಮುಹ್ರಿಮ್(ಮೇಲುಸ್ತುವಾರಿ) ಇಲ್ಲದೆ ಹಜ್‌ಗೆ ಹೋಗಲು ಆಗುತ್ತಿರಲಿಲ್ಲ. ನಮ್ಮ ಸರ್ಕಾರವು ಮುಹ್ರಿಮ್ ಇಲ್ಲದೆಯೂ ಹಜ್‌ಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಹಲವು ಮುಸ್ಲಿಂ ತಾಯಂದಿರ ಹಜ್‌ಗೆ ತೆರಳುವ ಕನಸು ಈಡೇರಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಎಸ್‌ಪಿಯಂತಹ ಪಕ್ಷಗಳು ಮುಸ್ಲಿಮರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ಎಂದಿಗೂ ಏನನ್ನೂ ಮಾಡಿಲ್ಲ ಎಂದ ಪ್ರಧಾನಿ, ತ್ರಿವಳಿ ತಲಾಖ್‌ಗೆ ಅನೇಕ ಹೆಣ್ಣುಮಕ್ಕಳ ಜೀವನವು ನಾಶವಾಯಿತು. ತ್ರಿವಳಿ ತಲಾಖ್‌ನಿಂದಾಗಿ ಮಗಳು, ಅವಳ ತಂದೆ, ಸಹೋದರ ಮತ್ತು ಕುಟುಂಬ ಎಲ್ಲರೂ ತೊಂದರೆಗೀಡಾಗುತ್ತಿದ್ದರು. ನಾನು ದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿ ಮಾಡುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳ ಜೀವನವನ್ನು ಭದ್ರಪಡಿಸಿದ್ದೇನೆ ಎಂದು ಭಾಷಣದಲ್ಲಿ ಹೇಳಿದ್ದಾರೆ.
ಆದರೆ ನಿನ್ನೆಯ ಭಾಷಣಕ್ಕೆ ಯಾವುದೇ ವಿಷಾದ ಪ್ರಧಾನಿ ಮೋದಿಯಿಂದ ವ್ಯಕ್ತವಾಗಿಲ್ಲ.