►65 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದ ವಿನಾಯಕ್
ಗದಗ: ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಘಟನೆ ಸಂಬಂಧ 8 ಮಂದಿ ಆರೋಪಿಗಳನ್ನು 48 ಗಂಟೆಗಳ ಒಳಗಾಗಿ ಬಂಧಿಸಿದ್ದೇವೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಗದಗ ಎಸ್ ಪಿ ಬಿಎಸ್ ನೇಮಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಘಟನೆ ಸಂಬಂಧ ಪ್ರಮುಖ ಆರೋಪಿ ವಿನಾಯಕ್ ಬಾಕಳೆ ಸೇರಿದಂತೆ, ಇತರ ಆರೋಪಿಗಳಾದ ಫೈರೋಜ್ ಖಾಜಿ, ಜಿಶಾನ್ ಖಾಜಿ, ಮೀರಜ್ ಮೂಲದ ಸಾಹಿಲ್, ಸೋಹೆಲ್ ಖಾಜಿ, ಸುಲ್ತಾನ್ ಶೇಖ್, ಮಹೇಶ್ ಸಾಳೋಂಕೆ, ವಾಹಿದ್ ಬೇಪಾರಿಯನ್ನು ಬಂಧಿಸಲಾಗಿದೆ.
65 ಲಕ್ಷ ರೂಪಾಯಿಗೆ ನಡೆದಿತ್ತು ಡೀಲ್, ಸುಪಾರಿ ಕೊಟ್ಟಿದ್ದ ವಿನಾಯಕ್
ಪ್ರಕರಣದ ಮೊದಲ ಆರೋಪಿ ವಿನಾಯಕ್ ಬಾಕಳೆ (ಪ್ರಕಾಶ್ ಬಾಕಳೆಯ ಮೊದಲ ಪತ್ನಿಯ ಮಗ) ಮತ್ತೊಬ್ಬ ಆರೋಪಿ ಫೈರೋಜ್ಗೆ 65 ಲಕ್ಷ ರೂಪಾಯಿ ಹಣಕ್ಕೆ ಸುಪಾರಿ ಡೀಲ್ ಕೊಟ್ಟಿದ್ದ. ಮುಂಗಡವಾಗಿ 2 ಲಕ್ಷ ರೂಪಾಯಿ ಕೊಟ್ಟಿದ್ದ ವಿನಾಯಕ್ ಬಾಕಳೆ ತಂದೆ ಪ್ರಕಾಶ್ ಬಾಕಳೆ, ಅವರ ಪತ್ನಿ ಸುನಂದಾ ಹಾಗೂ ಪುತ್ರ ಕಾರ್ತಿಕ್ ಕೊಲೆಗೆ ಸಂಚು ಹೂಡಿದ್ದ. ತಂದೆ ಪ್ರಕಾಶ್ ಜೊತೆ ವ್ಯವಹಾರಿಕ ವೈಮನಸ್ಸಿನ ಕಾರಣ ಈ ಕೊಲೆಗೆ ಆತ ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.