ಮಂಗಳೂರು: ಇಲ್ಲಿನ ಅರಣ್ಯ ಇಲಾಖೆ ವತಿಯಿಂದ ನಗರದ ಪಡೀಲ್ ಸಸ್ಯ ಪಾಲನಾಲಯದಲ್ಲಿ ಇಂದು ಮತ ಜಾಗೃತಿ ಕಾರ್ಯಕ್ರಮ ನಡೆಯಿತು. 26ರಂದು ಎಲ್ಲರೂ ಮತದಾನ ಮಾಡಲು ಕರೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ಎಲ್ಲರನ್ನು ಒಳಗೊಳ್ಳುವ ರಾಷ್ಟ್ರ ನಿರ್ಮಾಣ ಮಾಡುವುದು ಸಂವಿಧಾನದ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಸಮಾನ ಮತದಾನ ಹಕ್ಕು ಕಲ್ಪಿಸಲಾಗಿದೆ. ಅರ್ಹ ಮತದಾರರೆಲ್ಲರೂ ತಪ್ಪದೇ ಏ.26ರಂದು ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಸ್ವೀಪ್ ಅಧಿಕಾರಿ ಲೊಕೇಶ್, ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿಯೊಬ್ಬ ನಾಗರಿಕ ತನ್ನ ಜವಾಬ್ದಾರಿ ಎಂದು ಅರಿತು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ವೇಳೆ ಕಡ್ಡಾಯ ಮತದಾನ ಮಾಡುವಂತೆ ಮತದಾರರ ಜಾಗೃತಿ ಪ್ರತಿಜ್ಞಾ ವಿಧಿಯನ್ನೂ ಬೋಧಿಸಲಾಯಿತು.
ಅರಣ್ಯ ಇಲಾಖೆಯ ಮಂಗಳೂರು ವಿಭಾಗ ಅಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ, ಸ್ವೀಪ್ ಅಧಿಕಾರಿಗಳು, ಕಾರ್ಮಿಕರು ಹಾಜರಿದ್ದರು.