ಗಾಝಾ: ಪ್ಯಾಲೆಸ್ತೀನ್ ಪ್ರಜೆಗಳಿಗೆ ಇಸ್ರೇಲ್ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಯುದ್ಧಪೀಡಿತ ಗಾಝಾದ ಉತ್ತರ ಭಾಗಕ್ಕೆ ವಾಪಸ್ ಬರಬಾರದು ಎಂದು ಹೇಳಿದೆ.
ದಾಳಿಗೆ ತುತ್ತಾದ ಉತ್ತರ ಗಾಝಾದಿಂದ ಇತರ ಕಡೆ ಸ್ಥಳಾಂತರಗೊಂಡವರಲ್ಲಿ ಕೆಲವರು ವಾಪಸ್ ಮನೆಗೆ ಬರಲು ಯತ್ನಿಸುತ್ತಿದ್ದಾಗ ಐವರು ಹತ್ಯೆಗೀಡಾಗಿದ್ದಾರೆ ಎಂದು ಗಾಝಾ ಆಸ್ಪತ್ರೆ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಅದರ ಮಾರನೇ ದಿನವೇ ಇಸ್ರೇಲ್ ಸೇನೆಯ ಈ ಎಚ್ಚರಿಕೆ ಹೊರಬಿದ್ದಿದೆ.
ಇಸ್ರೇಲ್, ಉತ್ತರ ಗಾಜಾವನ್ನು ಗುರಿಯಾಗಿಸಿಕೊಂಡಿದ್ದು, ಬಹುತೇಕ ಭಾಗದಲ್ಲಿದ್ದ ಮನೆಗಳನ್ನು ನೆಲಸಮಗೊಳಿಸಿದೆ. ಇದರಿಂದಾಗಿ ಇಲ್ಲಿ ನೆಲೆ ಕಂಡುಕೊಂಡಿದ್ದ ಹಲವರು ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಂಡಿದ್ದಾರೆ. ಉತ್ತರ ಗಾಜಾದಲ್ಲಿ ಮುಂದಿನ ಆರು ತಿಂಗಳು ಯುದ್ಧ ಮುಂದುವರಿಯುವ ಕಾರಣ, ಅಲ್ಲಿಯವರೆಗೆ ಯಾರೂ ಈ ಭಾಗಕ್ಕೆ ಬರದಂತೆ ಇಸ್ರೇಲ್ ತಡೆಹಿಡಿದಿದೆ.