ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಭಾನುವಾರ (ಏ.14) ಬರುತ್ತಿದ್ದು, ರಾಜ್ಯಕ್ಕೆ ಏನೇನು ಕೊಡುಗೆಗಳನ್ನು ನೀಡಿದ್ದೇನೆ ಎಂಬುದನ್ನು ತಿಳಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಶನಿವಾರ ಮಾತನಾಡಿದ ಅವರು, ಮೋದಿಯವರು ಪ್ರಚಾರಕ್ಕಾಗಿ ಮೈಸೂರಿಗೆ ಬರುತ್ತಿರುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ. ನಿರುದ್ಯೋಗ ನಿವಾರಣೆಗೆ ಏನು ಮಾಡಿದ್ದಾರೆ? ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಅದನ್ನು ಪರಿಹರಿಸಲು ಏನು ಮಾಡಿದ್ದಾರೆ? ಬರ ಪರಿಹಾರವನ್ನು ಈವರೆಗೂ ಕೊಟ್ಟಿಲ್ಲವೇಕೆ ಎಂಬುದನ್ನೆಲ್ಲ ತಿಳಿಸಬೇಕು ಎಂದು ಒತ್ತಾಯಿಸಿದರು. ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯ ಇಲ್ಲ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಂವಿಧಾನ ಬದಲಾಯಿಸುತ್ತೇವೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲವೇಕೆ? ಅವರು ಕೇಂದ್ರ ಸಚಿವರಾಗಿದ್ದರು. ಅವರನ್ನೇಕೆ ಸ್ಥಾನದಿಂದ ತೆಗೆಯಲಿಲ್ಲ. ಅವರು ಉತ್ತರ ಕನ್ನಡದಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಮನೆಯಲ್ಲೇ ಕುಳಿತಿದ್ದ. ಚುನಾವಣೆ ಸಮಯದಲ್ಲಿ ಹೊರಗೆ ಬಂದಿದ್ದ. ಅವನು ಸೋಲುತ್ತಾನೆಂದು ವರದಿ ಬಂದಿದ್ದರಿಂದಲೇ ಟಿಕೆಟ್ ಕೊಟ್ಟಿಲ್ಲ ಎಂದರು.