ತಿರುವನಂತಪುರಂ: ವಯನಾಡಿನ ಪಶುವೈದ್ಯಕೀಯ ಕಾಲೇಜಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿ ಸಾಯೋ ಮೊದಲು ಅಪಾರ ಮಾನಸಿಕ ಮತ್ತು ದೈಹಿಕೆ ಹಿಂಸೆ ಅನುಭವಿಸಿದ್ದರು, ಅವರಿಗೆ 29 ಗಂಟೆಗಳ ಕಾಲ ನಿರಂತರವಾಗಿ ಚಿತ್ರಹಿಂಸೆ ನೀಡಲಾಗಿತ್ತು ಎಂದು ಪೊಲೀಸ್ ವರದಿ ತಿಳಿಸಿದೆ.
ಹಿರಿಯ ವಿದ್ಯಾರ್ಥಿಗಳು ಮತ್ತು ಗೆಳೆಯರು ಸಿದ್ಧಾರ್ಥನ್ ಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಇದರಿಂದಾಗಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ ಎಂದು ವೈತಿರಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪ್ರಶೋಭ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ವಿದ್ಯಾರ್ಥಿ ಸಾವಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಶುಕ್ರವಾರ 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕೇರಳ ರ‍್ಯಾಗಿಂಗ್ ನಿಷೇಧ ಕಾಯಿದೆಯ ನಿಬಂಧನೆಗಳ ಆರೋಪಗಳನ್ನು ವಿಧಿಸಿದೆ.
ವಯನಾಡ್ ಪಶುವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ 20 ವರ್ಷದ ಜೆ.ಎಸ್. ಸಿದ್ಧಾರ್ಥನ್ ನ ಮೃತದೇಹ ಹಾಸ್ಟೆಲ್ ಬಾತ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿದ್ಯಾರ್ಥಿ ಆತ್ಮಹತ್ಯೆಗೆ ಮೊದಲು ಹಿರಿಯ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳು 29 ಗಂಟೆ ನಿರಂತರವಾಗಿ ರ‍್ಯಾಗಿಂಗ್ ನಡೆಸಿದ್ದರು ಎಂದು ಕೇರಳ ಪೊಲೀಸರು ಸಿಬಿಐಗೆ ಹಸ್ತಾಂತರಿಸಿದ ವರದಿಯಲ್ಲಿ ತಿಳಿಸಿದ್ದಾರೆ.