ತೇಜಸ್ವಿ ಸೂರ್ಯ ಇಂದು ನಾಮಪತ್ರ ಸಲ್ಲಿಕೆ: ಜೈನ್ ಕಾಲೇಜಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಫರ್ಮಾನು!

Prasthutha|

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ತೇಜಸ್ವಿ ಸೂರ್ಯ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆದರೆ ಈ ನಾಮಪತ್ರ ಸಲ್ಲಿಸುವ ಸಂದರ್ಭದ ಮೆರವಣಿಗೆಯಲ್ಲಿ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ‘ಫರ್ಮಾನು’ ಹೊರಡಿಸಲಾಗಿದೆ ಎನ್ನಲಾಗಿದ್ದು, ಅದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

- Advertisement -

ಬೆಂಗಳೂರಿನ ವಿವಿ ಪುರಂನಲ್ಲಿರುವ ಜೈನ್ ಕಾಲೇಜಿನ ವಾಟ್ಸಪ್ ಗ್ರೂಪಿನಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದ್ದು ತಿಳಿದು ಬಂದಿದೆ.

ನಾಳೆ(ಏಪ್ರಿಲ್ 4) ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಮೆರವಣಿಗೆ ನಡೆಯಲಿದೆ. ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ಸದಸ್ಯರು ಸೇರಿ ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಜಯನಗರದ ಮೈಯ್ಯಾಸ್ ಹೋಟೆಲ್ ಬಳಿ ಸೇರಬೇಕು. ಅಲ್ಲಿ ನಿಮಗೆ ಟಿ-ಶರ್ಟ್ ನೀಡಲಾಗುವುದು. ಆದ್ದರಿಂದ ತಡ ಮಾಡಬಾರದು. ಕಡ್ಡಾಯವಾಗಿ ಇದರಲ್ಲಿ ಭಾಗವಹಿಸಬೇಕು. ಇದರಿಂದ ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಇದಕ್ಕಾಗಿ ನೀವು ಹಾಜರಾತಿ ಪಡೆಯುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.



Join Whatsapp