ಶಿವಮೊಗ್ಗ: ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ಅವರಿಗೆ ಮಂಗಳವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಕರೆ ಮಾಡಿ ಮಾತನಾಡಿದ್ದು, ಬುಧವಾರ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.
ಅಮಿತ್ ಶಾ ಕರೆಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಈಶ್ವರಪ್ಪ ಈ ಬಗ್ಗೆ ಆಪ್ತರ ವಲಯದಲ್ಲಿ ಚರ್ಚಿಸಿದ್ದಾರೆ. ದೆಹಲಿಗೆ ಹೋಗುತ್ತೇನೆ. ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ. ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಮೋದಿ ಅವರು ಕಾಂಗ್ರೆಸ್ನಲ್ಲಿ ಕುಟುಂಬ ಸಂಸ್ಕೃತಿ ಇದೆ ಎನ್ನುತ್ತಿದ್ದರು. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಕುಟುಂಬದ ಕೈಯಲ್ಲಿದೆ. ಆ ಕುಟುಂಬದಿಂದ ಪಕ್ಷ ಮುಕ್ತಿ ಆಗಬೇಕು. ಕಾರ್ಯಕರ್ತರಿಗೆ ನೋವಾಗಿದೆ. ಕಾರ್ಯಕರ್ತರ ನೋವು ನಿವಾರಿಸಲು ಸ್ಪರ್ಧೆ ಮಾಡುತ್ತೇನೆ. ಹಿಂದುತ್ವಕ್ಕೆ ಬೆಲೆ ಸಿಗಬೇಕು, ಸಂಘಟನೆಗೆ ಬೆಲೆ ಸಿಗಬೇಕು. ಹಿಂದುಳಿದವರಿಗೆ ರಾಜ್ಯದಲ್ಲಿ ಟಿಕೆಟ್ ಕೊಟ್ಟಿಲ್ಲ. ಅವ್ಯವಸ್ಥೆ ಸರಿಪಡಿಸಲು ಸ್ಪರ್ಧೆ ಮಾಡುತ್ತಿದ್ದೇನೆ. ಕಣದಿಂದ ಹಿಂದಕ್ಕೆ ಸರಿಯಿರಿ. ಆಮೇಲೆ ಬದಲಾವಣೆ ಮಾಡೋಣ ಎಂದರು. ನಾನು ನಿಮಗೆ ಗೌರವ ಕೊಟ್ಟು ದೆಹಲಿಗೆ ಬರುತ್ತೇನೆ. ಆದರೆ ಕಣದಿಂದ ಹಿಂದಕ್ಕೆ ಮಾತ್ರ ಸರಿಯುವುದಿಲ್ಲ ಎಂದು ಹೇಳಿದ್ದೇನೆ ಎಂದರು.