ಅಮಿತ್ ಶಾಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ: ಸಿದ್ದರಾಮಯ್ಯ ಪ್ರಶ್ನೆ

Prasthutha|

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ ಅಥವಾ ಕಿತ್ತುಕೊಳ್ಳುವುದಕ್ಕೋ? ಬರ ಪರಿಹಾರಕ್ಕೆ ಮನವಿ ಮಾಡಿ ನಾಲ್ಕು ತಿಂಗಳು ಕಳೆದರೂ ನಯಾಪೈಸೆ ಕೊಟ್ಟಿಲ್ಲ. ಹಿಂದೆ ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗಲೂ ಹೀಗೆಯೇ ಅನ್ಯಾಯ ಮಾಡಿದ್ದಿರಿ. ನಿಮಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -


ಮಾಧ್ಯಮ ಪ್ರಕಟಣೆ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2019ರಲ್ಲಿ ರಾಜ್ಯದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದಾಗಲೂ ಅತಿವೃಷ್ಟಿಯಿಂದಾಗಿರುವ ಹಾನಿಗೆ ಪರಿಹಾರ ನೀಡದೆ ಸತಾಯಿಸಿದ್ದೀರಿ. ಕನ್ನಡಿಗರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ. ಬಿಜೆಪಿಯನ್ನು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಅವಕಾಶ ನೀಡದಿರುವುದೇ ಅಪರಾಧವಾಗಿ ಹೋಯಿತೇ? ಕನ್ನಡ ಧ್ವಜವನ್ನು ರೂಪಿಸಿ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿ ಆರು ವರ್ಷಗಳಾಯಿತು. ಇಲ್ಲಿಯವರೆಗೆ ಅದಕ್ಕೆ ಅನುಮೋದನೆ ನೀಡಿಲ್ಲ, ಕನ್ನಡ ಧ್ವಜದ ಬಗ್ಗೆ ಯಾಕೆ ನಿಮ್ಮ ವಿರೋಧ? ನಿಮ್ಮ ಸರ್ಕಾರದ ಸಾಧನೆಯನ್ನು ಜನತೆಯ ಮುಂದಿಟ್ಟು ಮತಯಾಚನೆ ಮಾಡಿ. ಇದರಿಂದ ಗೌರವದ ಸೋಲನ್ನಾದರೂ ಪಡೆಯಬಹುದು ಎಂದು ಕಿಡಿಕಾರಿದರು.


ನೀವು ಕರ್ನಾಟಕಕ್ಕೆ ಬರುವುದು ಕರ್ನಾಟಕದ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯನ್ನು ಉಳಿಸುವುದಕ್ಕೋ, ಕೆಡಿಸುವುದಕ್ಕೋ? ಎಂಬ ಪ್ರಶ್ನೆ ಕನ್ನಡಿಗರ ಮನಸ್ಸಿನಲ್ಲಿ ಹುಟ್ಟಿಕೊಳ್ಳಲು ನೀವೇ ಕಾರಣವಲ್ಲವೇ? ಮಳೆ ಕೊರತೆಯಿಂದಾಗಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಅಂದಾಜು 33,770 ಕೋಟಿಯಷ್ಟು ನಷ್ಟವಾಗಿದೆಯೆಂದು ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ ಅಂದಾಜು ಮಾಡಿತ್ತು. ಇದರಲ್ಲಿ ಕನಿಷ್ಠ 17,901 ಕೋಟಿ ಪರಿಹಾರವನ್ನಾದರೂ ನೀಡಬೇಕೆಂಬುದು ಕರ್ನಾಟಕ ಸರ್ಕಾರ ಬೇಡಿಕೆ ಇಟ್ಟಿದೆ. ಇದಕ್ಕಾಗಿ ಪತ್ರದ ಮೇಲೆ ಪತ್ರ ಬರೆದೆವು, ಪ್ರಧಾನಿಯವರ ಜೊತೆ ಬರಪರಿಹಾರ ನೀಡುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾದ ನಿಮ್ಮನ್ನೂ ಭೇಟಿಯಾದೆವು. ಈವರೆಗೆ ಒಂದು ಪೈಸೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -


ಒಂದು ವಾರದೊಳಗೆ ಉನ್ನತಾಧಿಕಾರ ಸಮಿತಿಯ ಸಭೆ ಕರೆಯುತ್ತೇನೆ ಎಂದು ಕಳೆದ ಸೆಪ್ಟೆಂಬರ್ನಲ್ಲಿ ನೀವು ನನಗೆ ಆಶ್ವಾಸನೆ ಕೊಟ್ಟಿದ್ದೀರಿ. ವಾರ ಕಳೆದು ತಿಂಗಳುಗಳ ಮೇಲೆ ತಿಂಗಳುಗಳು ಕಳೆದುಹೋಯಿತು. ಇಲ್ಲಿಯವರೆಗೆ ನೀವು ಸಭೆಯನ್ನು ಕರೆದಿಲ್ಲ, ಬರಪರಿಹಾರವನ್ನು ನೀಡಿಲ್ಲ ಯಾಕೆ?ಈ ಅನ್ಯಾಯ ಇದೇ ಮೊದಲ ಸಲವೇನಲ್ಲ, 2017ರಲ್ಲಿಯೂ ಕರ್ನಾಟಕದಲ್ಲಿ ಬರಗಾಲ ಬಂದಿತ್ತು. ಇದರಿಂದಾಗಿ ಅಂದಾಜು 30,000 ಕೋಟಿಯಷ್ಟು ನಷ್ಟ ಉಂಟಾಗಿತ್ತು. ಆಗ ಕೇಂದ್ರ ಸರ್ಕಾರ ನೀಡಿದ್ದು ಕೇವಲ 1,435 ಕೋಟಿ ಪರಿಹಾರ ನೀಡಿದೆ. ಅದೇ ವರ್ಷ ಮಹಾರಾಷ್ಟ್ರಕ್ಕೆ 8,195 ಕೋಟಿ ಮತ್ತು ಗುಜರಾತ್ಗೆ 3,894 ಕೋಟಿ ಪರಿಹಾರ ನೀಡಲಾಗಿತ್ತು ಎಂದು ವಾಗ್ದಾಳಿ ಮಾಡಿದರು.


ಕರಾವಳಿಯ ರೈತರೇ ಕಟ್ಟಿ ಬೆಳೆಸಿದ್ದ ವಿಜಯಾ ಬ್ಯಾಂಕನ್ನು ನುಂಗಿದ್ದು ಗುಜರಾತಿನ ಬರೋಡಾ ಬ್ಯಾಂಕ್. ಕಾಂಗ್ರೆಸ್ ನಾಯಕರ ಪ್ರಯತ್ನದಿಂದ ನಿರ್ಮಾಣಗೊಂಡಿದ್ದ ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ನಮ್ಮಿಂದ ಕಿತ್ತುಕೊಂಡದ್ದು ಗುಜರಾತ್ನ ಉದ್ಯಮಿ ಅದಾನಿ. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ?ನಮ್ಮ ರೈತರೇ ಕಟ್ಟಿರುವ ಕರ್ನಾಟಕದ ಹೆಮ್ಮೆಯ ಕೆಎಂಎಫ್ ಅನ್ನು ಗುಜರಾತ್ನ ಅಮುಲ್ ಜೊತೆ ವಿಲೀನಗೊಳಿಸಲು ಹೂಡಿದ್ದ ಸಂಚನ್ನು ಕನ್ನಡಿಗರು ಮರೆತಿಲ್ಲ. ರಾಜ್ಯದಲ್ಲಿ ಆ ಕಾಲದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ನೆರವಿನಿಂದ ಒಂದಷ್ಟು ದಿನ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಮಾಯ ಮಾಡಿ, ಅಮುಲ್ ಉತ್ಪನ್ನಗಳು ಎಲ್ಲೆಲ್ಲೂ ರಾರಾಜಿಸುವಂತೆ ಮಾಡಿದ್ದು ನೀವೇ ಅಲ್ಲವೇ? ನಮ್ಮ ನಂದಿನಿಯನ್ನು ಉಳಿಸಲು ಕರ್ನಾಟಕದಾದ್ಯಂತ ಸ್ವಾಭಿಮಾನಿ ಕನ್ನಡಿಗರು ಎದ್ದು ನಿಂತಾಗ ಬೇರೆ ದಾರಿ ಕಾಣದೆ ನಿಮ್ಮ ದುರಾಲೋಚನೆಯನ್ನು ಕೈಬಿಟ್ಟದ್ದು ನಿಜ ಅಲ್ಲವೇ? ಕರ್ನಾಟಕದಲ್ಲಿ ಮತಕೇಳುವ ಮೊದಲು ಕನ್ನಡಿಗ ಮತದಾರರ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದರು.



Join Whatsapp