ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಶಿವಸೇನೆ ಬೆಂಬಲ ಘೋಷಿಸಿದೆ. ಈ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಶಿವಸೇನಾ ನಿರ್ಧರಿಸಿದೆ ಎಂದು ಪಕ್ಷದ ಹಿರಿಯ ಮುಖಂಡ ಸಂಜಯ್ ರಾವತ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹಣ, ತೋಳ್ಬಲ ಮತ್ತು ಮಾಧ್ಯಮಗಳನ್ನು ಬಳಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿಯನ್ನು ಶಿವಸೇನೆ ಬೆಂಬಲಿಸಲಿದೆ ಎಂದು ಸಂಜಯ್ ರಾವುತ್ ತಿಳಿಸಿದ್ದಾರೆ.
‘ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸುವ ಬಗ್ಗೆ ತಿಳಿಯಲು ಬಹಳಷ್ಟು ಜನರಿಗೆ ಕುತೂಹಲವಿದೆ. ಆದ್ದರಿಂದ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಿದ ನಂತರ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಸನ್ನಿವೇಶವನ್ನು ನೋಡಿದಾಗ, ಇದು ‘ದೀದಿ ವರ್ಸಸ್ ಆಲ್’ ಹೋರಾಟದಂತೆ ಕಾಣುತ್ತದೆ. ದೀದಿ ವಿರುದ್ಧ ಹಣ, ತೋಳ್ಬಲ ಮತ್ತು ಮಾಧ್ಯಮಗಳನ್ನು ಬಳಸಲಾಗುತ್ತಿದೆ. ಆದ್ದರಿಂದ, ಮಮತಾ ಅವರ ಪರವಾಗಿ ಶಿವಸೇನೆ ನಿಲ್ಲಲಿದೆ. ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ.