ಗೋಕರ್ಣ: ಬಿಜೆಪಿಯಲ್ಲಿ ಈಗ ಸಿದ್ದಾಂತಕ್ಕೆ ಬೆಲೆಯಿಲ್ಲ. ಪಕ್ಷ ಕಟ್ಟಿ, ಬೆಳೆಸಿ, ಪಕ್ಷಕ್ಕಾಗಿ ದುಡಿದವರು ಈಗ ಮನೆಯಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು..
ಬುಧವಾರ ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜತೆ ಅವರು ಮಾತನಾಡಿದರು. ಸಿದ್ದಾಂತ ಇಲ್ಲದ ಹೊರಗಿನಿಂದ ಬಂದವರೇ ಈಗ ಬಿಜೆಪಿಯಲ್ಲಿ ಆಳುವವರು ಎಂದ ಡಿಕೆಶಿ, ಉತ್ತರ ಕನ್ನಡ ಜಿಲ್ಲೆಯ ಮಾಸ್ ಲೀಡರ್ ಅನ್ನೇ ಇಂದು ಮನೆಗೆ ಕಳುಹಿಸಿದ್ದಾರೆ ಎಂದು ಅನಂತಕುಮಾರ ಹೆಗಡೆ ಹೆಸರು ಹೇಳದೆ ಬಿಜೆಪಿಯನ್ನು ಟೀಕಿಸಿದರು.
ಕರ್ನಾಟಕದಲ್ಲಿ ಎಲ್ಲಿಯೂ ಬಿಜೆಪಿ ಗಾಳಿಯಿಲ್ಲ. ಎಲ್ಲಾ ಕಡೆ ಕಾಂಗ್ರೆಸ್ಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿಯೂ ಕಾಂಗ್ರೆಸ್ ವಾತಾವರಣವಿದೆ. ಅದೇ ಕಾರಣದಿಂದ ಈಗ ಮೋದಿ ಗ್ಯಾರಂಟಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.