ನಿರ್ಮಲಾ ಸೀತಾರಾಮನ್ ಬಹಿರಂಗ ಚರ್ಚೆಗೆ ಸಿದ್ಧರಿದ್ದಾರಾ? ಕೃಷ್ಣ ಬೈರೇಗೌಡ ಸವಾಲು

Prasthutha|

ಬೆಂಗಳೂರು: ಕರ್ನಾಟದಿಂದಲೇ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ. ಮಾರ್ಚ್‌ 31ಕ್ಕೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು ಸಿದ್ಧರಿದ್ದಾರಾ ಎಂದು ಸಚಿವ ಕೃಷ್ಣ ಬೈರೇಗೌಡ ಸವಾಲು ಹಾಕಿದ್ದಾರೆ.

- Advertisement -

ರಾಜ್ಯಕ್ಕೆ ಜಿಎಸ್‌ಟಿ ತೆರಿಗೆ ಹಂಚಿಕೆ ಬಾಕಿ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್, ” ಕರ್ನಾಟಕಕ್ಕೆ ನೀಡಬೇಕಿರುವ ತೆರಿಗೆ ಪಾಲಿನಲ್ಲಿ ಯಾವುದೇ ಹಣ ಬಾಕಿ ಇಲ್ಲ” ಎಂದು ಹೇಳಿದ್ದರು. ಇದರ ಬೆನ್ನಿಗೆ ಇಂದು ವಿಕಾಸಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ

ಯಾವುದೇ ರಾಜ್ಯಕ್ಕೆ 2019- 20ರಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಅನುದಾನವನ್ನು ಕೊಡುವಂತಿಲ್ಲ ಎಂದು ಹಣಕಾಸು ಆಯೋಗ ಹೇಳುತ್ತದೆ. ಹಣಕಾಸು ಆಯೋಗದವರು 2019-20ರಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಬಂದ ತೆರಿಗೆ ಪಾಲಿಗಿಂತ 2020-21 ರಲ್ಲಿ ರೂ. 5495 ಕೋಟಿ ಹಣ ಕಡಿಮೆಯಾಗಿತ್ತು. ಈ ಹಣವನ್ನು ರಾಜ್ಯಕ್ಕೆ ತುಂಬಿಕೊಡಬೇಕು ಎಂದು ಸ್ವತಃ ಹಣಕಾಸು ಆಯೋಗ ಶಿಫಾರಸು ಮಾಡಿದರೂ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದದ್ದು ಏಕೆ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.

- Advertisement -

ರಾಜ್ಯದ ಪಾಲಿನ ನ್ಯಾಯಯುತ ತೆರಿಗೆ ಹಂಚಿಕೆ ನಷ್ಟ ಪರಿಹಾರ ಕೇಳಿದರೆ ಸಚಿವೆ , 2021 ನೇ ವರ್ಷದ ಅಂತಿಮ ವರದಿಯಲ್ಲಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ, ಹಣಕಾಸು ಆಯೋಗದ ಅಂತಿಮ ವರದಿಯ 36ನೇ ಪುಟದಲ್ಲಿ ಕರ್ನಾಟಕಕ್ಕೆ ನಷ್ಟ ತುಂಬಿಕೊಡಬೇಕು ಎಂದು ಬರೆಯಲಾಗಿದೆಯಲ್ಲಾ ಇದೇನು? ಎಂದು ಸಚಿವರು ಕುಟುಕಿದರು.

2019-20ರಲ್ಲಿ ರಾಜ್ಯಕ್ಕೆ ಕೇಂದ್ರದಿಂದ ರೂ. 36675 ಕೋಟಿ ತೆರಿಗೆ ಪಾಲು ಬಂದಿತ್ತು. 2020-21ಕ್ಕೆ ಕೇವಲ ರೂ.31180 ಕೋಟಿಗೆ ಕುಸಿದಿತ್ತು. ಹೀಗಾಗಿ ರಾಜ್ಯಕ್ಕೆ ಆಗಿರುವ ನಷ್ಟ ರೂ. 5495 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೆ, ಈ ಹಣ ಈವರೆಗೆ ರಾಜ್ಯಕ್ಕೆ ಬಂದಿಲ್ಲ. 2021-26ನೇ ಸಾಲಿನಲ್ಲಿ ರೂ.6,000 ಕೋಟಿ ಶಿಫಾರಸು ಮಾಡಲಾಗಿದೆ. ಒಟ್ಟಾರೆ, ರೂ.11495 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ ಎಂದರು.



Join Whatsapp