ತುಮಕೂರು: ಸಂವಿಧಾನ ವಿರೋಧಿ ಹೇಳಿಕೆಯಿಂದ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ವಿ ಸೋಮಣ್ಣ, ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿದೆ. ಸಂವಿಧಾನವನ್ನು ಅಪಮಾನಿಸಿದರೆ ಅದಕ್ಕಿಂತ ಬೇರೆ ಪಾಪವಿಲ್ಲ. ಆದರೆ, ಕಾಂಗ್ರೆಸ್ ನವರು ಕೆಲವು ವಿಚಾರ ತಿರುಚುತ್ತಾರೆ. ಹೆಗಡೆ ಅವರು ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.
ಅಂಥಹ ಪುಣ್ಯಾತ್ಮ ಅಂಬೇಡ್ಕರ್ ಅವರ ಸಂಸ್ಕಾರಕ್ಕೇ ಕಾಂಗ್ರೆಸ್ ನವರು ಜಾಗ ಕೊಟ್ಟಿಲ್ಲ. ಕಾಂಗ್ರೆಸ್ ನವರಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇನೆ ಅಂತಾ ಯಾರೂ ಹೇಳಿಲ್ಲ. ಹೆಗಡೆ ಅವರು ತಮ್ಮ ಸ್ವಂತ ಅಭಿಪ್ರಾಯ ಎಂದಿದ್ದಾರೆ. ಅದಕ್ಕೆ ಅವರಿಗೆ ಶಿಕ್ಷೆ ಕೂಡ ಆಗಿದೆ ಎಂದರು.