ಬೆಂಗಳೂರು: ವಂಚನಾ ಜಾಲವೊಂದರಿಂದ ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರನ್ನು ಕಾರಿನಲ್ಲಿ ಸುಟ್ಟು ಕೊಂದಿರುವ ಘಟನೆ ಅತ್ಯಂತ ಹೇಯ ಕೃತ್ಯವಾಗಿದ್ದು, ಇದನ್ನು ಬಲವಾಗಿ ಖಂಡಿಸುತ್ತೇನೆ. ಇದು ರಾಜ್ಯದ ಗುಪ್ತಚರ ಇಲಾಖೆ ಮತ್ತು ಕಾನೂನು ಸುವ್ಯವಸ್ಥೆಯ ವೈಫಲ್ಯವಾಗಿದೆ. ಅದರ ಜೊತೆಗೆ ದಿನಬೆಳಗಾದರೆ ಇಂತಹ ಜಾಲಗಳ ಬಗೆಗಿನ ವರದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ಸಹ, ಜನರು ಮತ್ತೆ ಮತ್ತೆ ಅಂತಹದ್ದೇ ಜಾಲಗಳ ಆಮಿಷಗಳಿಗೆ ಒಳಗಾಗಿ ಹಣ ಮತ್ತು ಜೀವ ಎರಡನ್ನೂ ಕಳೆದುಕೊಳ್ಳುತ್ತಿರುವುದು ದುರಂತ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಪ್ರಕಟಣೆಯ ಮೂಲಕ ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ. ಈ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ನಡೆಸಿ ಈ ಘಟನೆಯ ಹಿಂದಿರುವ ಗುಂಪು ಅಥವಾ ವ್ಯಕ್ತಿಗಳನ್ನು ಶೀಘ್ರವೇ ಬಂಧಿಸುವ ಮೂಲಕ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸುವುದರ ಜೊತೆಗೆ ಈ ಜಾಲದ ವಂಚನೆ ಮತ್ತು ಕೌರ್ಯಕ್ಕೆ ಇನ್ನೊಂದಷ್ಟು ಜನರು ಸಿಲುಕಿಕೊಳ್ಳದಂತೆ ನೋಡಿಕೊಳ್ಳಬೇಕು. ಈ ಘಟನೆಯಲ್ಲಿ ಜೀವ ಕಳೆದುಕೊಂಡಿರುವವರ ಕುಟುಂಬಗಳಿಗೆ ತಕ್ಷಣ ತಲಾ 50 ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಭಾಸ್ಕರ್ ಪ್ರಸಾದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಂತಹ ಮೋಸ ಜಾಲಗಳು ದೇಶದ ಉದ್ದಗಲಕ್ಕೂ ಹರಡಿಕೊಂಡಿದ್ದು, ಅತಿ ಕಡಿಮೆ ಅವಧಿಯಲ್ಲಿ ಹಣವನ್ನು ಮೂರು ನಾಲ್ಕು ಪಟ್ಟು ಮಾಡಿಕೊಡುವ, ಅತಿ ಕಡಿಮೆ ಬೆಲೆಗೆ ಚಿನ್ನ ನೀಡುವ, ದೇವರು, ದೆವ್ವದ ಹೆಸರಿನಲ್ಲಿ ಹೆದರಿಸುವ ಮೂಲಕ ಜನರನ್ನು ವಂಚಿಸುವುದು, ಕೊಲ್ಲುವುದು ಮಾಡುತ್ತಲೇ ಇವೆ. ಸರ್ಕಾರ ಇಂತಹ ಗುಂಪುಗಳ ವಿರುದ್ಧ ಕಠಿಣ ಕಾನೂನನ್ನು ಜಾರಿಗೆ ತರಬೇಕು. ಅದರ ಜೊತೆಗೆ ಜನರೂ ಸಹ ಇಂತಹ ಜಾಲಗಳ ಆಮಿಷಗಳಿಗೆ ಒಳಗಾಗಬಾರದು. ಅಡ್ಡ ಮಾರ್ಗದಲ್ಲಿ ಹಣ ಗಳಿಸುವ ಆಮಿಷಗಳಿಂದ ದೂರ ಇರಬೇಕು ಎಂದು ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.