ದ.ಕ. ಲೋಕಸಭಾ ಕ್ಷೇತ್ರಕ್ಕೆ ಪದ್ಮರಾಜ್ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ

Prasthutha|

ಮಂಗಳೂರು: ದ.ಕ. ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಹೆಸರು ಅಂತಿಮಗೊಳಿಸಲಾಗಿದೆ. ನಾಳೆ ಬೆಳಿಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

- Advertisement -

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದ್ದು,17 ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಿದೆ ಎಂದು‌ ತಿಳಿದು ಬಂದಿದೆ.

ರಾಜ್ಯದಿಂದ ದ.ಕ. ಕ್ಷೇತ್ರದಲ್ಲಿ ಜನಾರ್ದನ ಪೂಜಾರಿಯವರು ಸೋತ ಬಳಿಕ ಗೆಲ್ಲಲಾಗದ ಕ್ಷೇತ್ರವನ್ನು ಪೂಜಾರಿಯವರ ಶಿಷ್ಯನ ಮೂಲಕ ಗೆದ್ದು ಕೈವಶ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷ ಪದ್ಮರಾಜ್ ಅವರನ್ನು ಕಣಕ್ಕಿಳಿಸಿದೆ. ಪದ್ಮರಾಜ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

- Advertisement -

ಕಾಂಗ್ರೆಸ್ ವೀಕ್ಷಕರು ಕೊಟ್ಟ ವರದಿಯಂತೆ ಕೆಪಿಸಿಸಿಯಿಂದ ಕಾಂಗ್ರೆಸ್ ಹೈಕಮಾಂಡ್ ಗೆ ರವಾನೆಯಾದ ಪಟ್ಟಿಯಲ್ಲಿ ಪದ್ಮರಾಜ್ ರಾಮಯ್ಯ ಮತ್ತು ವಿನಯ್ ಕುಮಾರ್ ಸೊರಕೆ ಅವರ ಹೆಸರಿತ್ತು. ಅಂತಿಮವಾಗಿ ಪದ್ಮರಾಜ್ ರಾಮಯ್ಯ ಅವರನ್ನು ಕಣಕ್ಕಿಳಿಸಲಾಗಿದೆ.

ಬಿಜೆಪಿಯಿಂದ ಹೊಸ ಮುಖ ಬ್ರಿಜೇಶ್ ಚೌಟಗೆ ಬಿಜೆಪಿ ಟಿಕೆಟ್ ನೀಡಿದ್ದು, ಈಗಾಗಲೇ ಚುನಾವಣಾ ಚಟುವಟಿಕೆ ಆರಂಭಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿ ಇಬ್ಬರೂ ಕೂಡಾ ಹೊಸ ಮುಖದ ಅಭ್ಯರ್ಥಿಗಳೇ ಆದಂತಾಗಿದೆ.

ಜನಾರ್ದನ ಪೂಜಾರಿಯವರ ಪ್ರೀತಿಯ ಶಿಷ್ಯನಾಗಿರುವ ಪದ್ಮರಾಜ್‌ ವೃತ್ತಿಯಲ್ಲಿ ವಕೀಲರಾಗಿದ್ದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ದೇವಾಲಯದ ಆಡಳಿತ ಸಮಿತಿಯ ಖಜಾಂಚಿ ಆಗಿದ್ದಾರೆ. ಜನಾರ್ಧನ ಪೂಜಾರಿ ಬಳಿಕ ಮಂಗಳೂರಿನ ಪ್ರಸಿದ್ಧ ದಸರಾ ಕೂಟದ ರೂವಾರಿ ಇವರೇ ಎಂದು ಹೇಳಲಾಗುತ್ತಿದೆ. ಜನರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.

ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎಂಟು ಬಾರಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಒಂಬತ್ತು ಬಾರಿ ಈ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಕಾಂಗ್ರೆಸ್ ನಿಂದ ಮತ್ತು ಬಿಜೆಪಿಯಿಂದ ಧನಂಜಯ ಕುಮಾರ್ ಸತತ ನಾಲ್ಕು ಬಾರಿ ಗೆದ್ದ ಕ್ಷೇತ್ರ. ಈ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಇಬ್ಬರು ಅಭ್ಯರ್ಥಿಗಳು ಕೇಂದ್ರದಲ್ಲಿ ಸಚಿವರಾಗಿದ್ದ ದಾಖಲೆಯು ಇದೆ. ಜೊತೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಎರಡು ಸಿಎಂ ಗಳನ್ನು ಕೊಟ್ಟ ಕ್ಷೇತ್ರವಾಗಿದೆ.1951ರಲ್ಲಿ ಪ್ರಥಮ ಲೋಕಸಭಾ ಚುನಾವಣೆ ನಡೆದಾಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಸೌತ್ ಕೆನಾರಾ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು.

ಎರಡನೇ ಬಾರಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ‌ ಜಿಲ್ಲೆ ಜೊತೆ ಕೊಡಗು ಸೇರಿಕೊಂಡು ಈ ಕ್ಷೇತ್ರವನ್ನು ಅಂದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು.1957 ರಿಂದ 2009 ರವರಗೆ ಕೊಡಗು ಮತ್ತು ದಕ್ಷಿಣ ಕನ್ನಡ ಒಂದೇ ಲೋಕಸಭಾ ಕ್ಷೇತ್ರ ಆಗಿತ್ತು. 2009 ರಲ್ಲಿ ಕ್ಷೇತ್ರ ವಿಭಾಜನೆಯಾದ ಬಳಿಕ ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಹೋಗಿ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಯಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ರಾಜಕೀಯ ಇತಿಹಾಸಆ ಒಂದು ಸಮಯದಲ್ಲಿ ಚುನಾವಣೆ ನಡೆದಾಗ ಅತೀ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸುತ್ತಿತ್ತು. ಅದೇ ಸಮಯದಲ್ಲಿ ಎರಡನೇ ಅತೀ ಹೆಚ್ಚು ಮತವನ್ನು ಪಡೆಯುತ್ತಿದ್ದ ಪಕ್ಷ ಸಿಪಿಐ.

1977 ರಲ್ಲಿ ಅಂದರೆ ತುರ್ತು ಪರಿಸ್ಥಿತಿಯ ನಂತರ ಇಡೀ ದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದರು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದು ಮಾಜಿ ಸಚಿವ ಜನಾರ್ಧನ ಪೂಜಾರಿ ಎಂಬುವುದು ದಾಖಲೆ. ಅದರ ನಂತರ ಸತತ ನಾಲ್ಕು ಬಾರಿ ಜನಾರ್ಧನ ಪೂಜಾರಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ.1991ರಿಂದ ಕಾಂಗ್ರೆಸ್‌ನ ಅವನತಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಆರಂಭ ಆಯಿತು. 1991ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಧನಂಜಯ ಕುಮಾರ್ ಗೆಲುವು ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು, ಅದರ ಬಳಿಕ ಸತತ ನಾಲ್ಕು ಬಾರಿ ಧನಂಜಯ ಕುಮಾರ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 2004ರಲ್ಲಿ ಡಿ.ವಿ ಸದಾನಂದ ಗೌಡ ಮೊದಲ ಬಾರಿಗೆ ಲೋಕಸಭೆಗೆ ಇದೇ ಕ್ಷೇತ್ರದಿಂದ ಆಯ್ಕೆ ಆಗಿದ್ದರು.2009 ರಿಂದ ನಳಿನ್ ಕುಮಾರ್ ‌ಕಟೀಲ್ ಈ ಕ್ಷೇತ್ರದಿಂದ ಸತತ ಗೆಲುವನ್ನು ಸಾಧಿಸುತ್ತ ಬಂದು, 2019ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವನ್ನು ಈ ಕ್ಷೇತ್ರದಿಂದ ಜಯ ಗಳಿಸಿದ್ದರು.

ಪದ್ಮರಾಜ್ ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ಕೋಟೆಯಾಗಿಸುತ್ತಾರೆಯೇ ಕಾದು ನೋಡಬೇಕಿದೆ.



Join Whatsapp