ನಗರ್ತಪೇಟೆ ಘಟನೆ ಹನುಮಾನ್ ಚಾಲೀಸಾ ಹಾಕಿದ್ದಕ್ಕಲ್ಲ: ಸ್ಥಳೀಯ ಬಿಜೆಪಿ ಶಾಸಕ

Prasthutha|

ಬೆಂಗಳೂರು: ನಗರ್ತ ಪೇಟೆಯಲ್ಲಿ ಅಂಗಡಿ ಮಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌ ಪ್ರತಿಕ್ರಿಯಿಸಿದ್ದು, ಇದು ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ನಡೆದ ಗಲಾಟೆಯಲ್ಲ, ಇದನ್ನು ಇಷ್ಟೊಂದು ದೊಡ್ಡದಾಗಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.

- Advertisement -

ಮಾದ್ಯಮಗಳ ಜೊತೆ ಮಾತನಾಡಿದ ಶಾಸಕ ಉದಯ್‌ ಗರುಡಾಚಾರ್‌, ಅದು ನನ್ನದೇ ಕ್ಷೇತ್ರ, ನಾನು ಘಟನೆ ಬಗ್ಗೆ ಎಲ್ಲಾ ತಿಳ್ಕೊಂಡಿದ್ದೇನೆ, ಇದನ್ನು ಇಷ್ಟು ದೊಡ್ಡ ಮಾಡುವ ಅಗತ್ಯ ಇರಲಿಲ್ಲ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನನಗೆ ತಿಳಿದಿದೆ. ಅನ್ಯ ಕೋಮಿನ ಜನರು ಹಲ್ಲೆ ಮಾಡಿದ್ದಾರೆ ಎಂದು ನಾನು ಯಾವತ್ತೂ ಹೇಳಲ್ಲ. ನಾನು ಸೆಕ್ಯೂಲರ್‌ ವ್ಯಕ್ತಿ. ಎಲ್ಲಾ ಜನಾಂಗದವರು ಚೆನ್ನಾಗಿ ಇರಬೇಕು ಎಂದು ಹೇಳುವವನು. ನನ್ನ ಕ್ಷೇತ್ರದಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ. ಇದುವರೆಗೆ ನಮ್ಮಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಗರುಡಾಚಾರ್ ಹೇಳಿದ್ದಾರೆ.

- Advertisement -

ಕ್ಷೇತ್ರದಲ್ಲಿ ವ್ಯಾಪರಸ್ಥರು ಸೇರಿದಂತೆ ಎಲ್ಲರೂ ಸುಲಲಿತವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಕಾನೂನು ನಂತರದ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ತೇಜಸ್ವಿ ಸೂರ್ಯ ನನ್ನಲ್ಲಿ ಮಾತನಾಡಿದ್ದಾರೆ, ಈ ವೇಳೆ ನಾನು ಸೂರ್ಯ ಅವರಲ್ಲಿ ಆರೋಪಿಗಳ ಬಂಧನವಾಗಿದೆ. ಇನ್ನು ಕಾನೂನು ಅದರ ಕೆಲಸವನ್ನು ಮಾಡುತ್ತದೆ ಎಂದು ಹೇಳಿದ್ದೇನೆ ಎಂದೂ ಸ್ಥಳೀಯ ಶಾಸಕ ಹೇಳಿದ್ದಾರೆ.

ಈ ಕುರಿತು ಕಾಂಗ್ರೆಸ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಕರ್ನಾಟಕದ ಬಿಜೆಪಿಗರಿಗೆ ತಪರಾಕಿ ನೀಡಿದ್ದಾರೆ, ಇದು ಬಿಜೆಪಿಯವರು ಚುನಾವಣೆಗಾಗಿ ಹಚ್ಚಿದ ಕೋಮು ಬೆಂಕಿ ಎನ್ನುವುದಕ್ಕೆ ಪುಷ್ಟಿ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದೆ.

ತೇಜಸ್ವಿ ಸೂರ್ಯನ ವಿರುದ್ಧ ಹರಿಹಾಯ್ದ ಕಾಂಗ್ರೆಸ್, ತೇಜಸ್ವಿ ಸೂರ್ಯ ಎಂಬ ಅವಿವೇಕಿ ಶಿಶುವಿಗೆ ಈ ಗಲಾಟೆಯ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಬೇಡ ಎಂದು ಸ್ವತಃ ಬಿಜೆಪಿ ಶಾಸಕರೇ ಹೇಳಿದ್ದರೂ ಕೋಮು ಸಂಘರ್ಷ ಉಂಟುಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ಕಣ್ಮರೆಯಾಗಿದ್ದ ತೇಜಸ್ವಿ ಸೂರ್ಯನಿಗೆ ತನ್ನ ಸಾಧನೆ ಹೇಳಿ ಮತ ಕೇಳುವ ಯೋಗ್ಯತೆ ಅರ್ಹತೆ ಇಲ್ಲದಿರುವುದೇ ಈ ಎಲ್ಲಾ ನಾಟಕಗಳ ಮೂಲ ಕಾರಣ ಎಂದು ಕಾಂಗ್ರೆಸ್ ಪೋಸ್ಟ್‌ ಮಾಡಿದೆ.

ಅಂತೂ ಈ ವಿಚಾರದಲ್ಲಿ ರಾಜಕೀಯ ಮಾಡಿದ್ದ ಬಿಜೆಪಿಗೆ ತನ್ನದೇ ಶಾಸಕರ ಹೇಳಿಕೆ ದೊಡ್ಡ ಮುಜುಗರವಾಗಿದೆ.



Join Whatsapp