313 ಸ್ಥಳಗಳಲ್ಲಿ ಹೊಸದಾಗಿ ಬೋರ್ ವೆಲ್, 1200 ನಿಷ್ಕ್ರಿಯ ಬೋರ್ ಗಳಿಗೆ ಮರುಜೀವ: ಸಿದ್ದರಾಮಯ್ಯ

Prasthutha|

ಬೆಂಗಳೂರು: 313 ಸ್ಥಳಗಳಲ್ಲಿ ಹೊಸದಾಗಿ ಬೋರ್ ವೆಲ್ ಕೊರೆಸುತ್ತಿದ್ದೇವೆ. 1200 ನಿಷ್ಕ್ರಿಯ ಬೋರ್ ಗಳಿಗೆ ಮರುಜೀವ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಸುದೀರ್ಘವಾಗಿ ಮಾಹಿತಿ ಪಡೆದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಸಿಎಂ ಮಾಹಿತಿ ಹಂಚಿಕೊಂಡರು.

ಕಾವೇರಿ, ಕಬಿನಿಯಲ್ಲಿ ಕುಡಿಯುವ ನೀರಿಗೆ ಅಗತ್ಯ ಇರುವಷ್ಟು ನೀರನ್ನು ಸಂಗ್ರಹಿಸಿದ್ದೇವೆ. ಜೂನ್ ಅಂತ್ಯದವರೆಗೂ ಸಾಕಾಗುವಷ್ಟು ನೀರನ್ನು ಸಂಗ್ರಹಿಸಿದ್ದೇವೆ. KRS ನಲ್ಲಿ 11.02, ಕಬಿನಿಯಲ್ಲಿ 9.02 ಟಿಎಂಸಿ ನೀರು ಸಂಗ್ರಹವಿದೆ. 14000 ಸರ್ಕಾರಿ ಬೋರ್ ವೆಲ್ ಗಳಲ್ಲಿ 6900 ಬತ್ತಿವೆ. ಹೀಗಾಗಿ ಸಮಸ್ಯೆ ಆಗಿದೆ. 110 ಹಳ್ಳಿಗಳಲ್ಲಿ 55 ಹಳ್ಳಿಗಳಿಗೆ ಸಮಸ್ಯೆ ಆಗಿದೆ. ಜೂನ್ ಅಂತ್ಯಕ್ಕೆ ಕಾವೇರಿ 5 ನೇ ಹಂತದ ಕಾಮಗಾರಿ ಮುಕ್ತಾಯವಾಗಿ 775 MLD ಹೆಚ್ಚುವರಿ ನೀರು ಸಿಗತ್ತೆ. ಇದು 110 ಹಳ್ಳಿಗಳಿಗೆ ಸರಬರಾಜು ಆಗ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

- Advertisement -

ಕೊಳೆಗೇರಿ, ಎತ್ತರದ ಪ್ರದೇಶದಲ್ಲಿ ಹಾಗೂ ಬೋರ್ ವೆಲ್ ಮೇಲೆ ಅಬಲಂಬಿತ ಪ್ರದೇಶಗಳಲ್ಲಿ KMF ಸೇರಿ ಎಲ್ಲಾ ಖಾಸಗಿ ಟ್ಯಾಂಕರ್ ಗಳನ್ನು ಬಳಸಲು ಹೇಳಿದ್ದೇನೆ. ಕಂಟ್ರೋಲ್ ರೂಮ್ ಗಳ ಸಂಖ್ಯೆ ಹೆಚ್ವಿಸಿ ದೂರು‌ಬಂದ ತಕ್ಷಣ ಆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಟಾಸ್ಕ್ ಫೋರ್ಸ್ ಹೆಚ್ವಿಸಿ ದೂರುಗಳಿಗೆ ತಕ್ಷಣ ಸ್ಪಂದಿಸಲು ಹೇಳಲಾಗಿದೆ. ಪಾರ್ಕ್ ಗಳಲ್ಲಿ ಕುಡಿಯುವ ನೀರು ಬಳಸದಂತೆ, ಶುದ್ದೀಕರಿಸಿದ ನೀರು ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೆ.ಸಿ.ವ್ಯಾಲಿ ರೀತಿ ಬೆಂಗಳೂರಿನ‌ ಕೆರೆಗಳನ್ನೂ ಭರ್ತಿ ಮಾಡುವಂತೆ ಸೂಚನೆ ನೀಡಲಾಗಿದೆ. ಬತ್ತಿ ಹೋಗಿರುವ ಪ್ರಮುಖ 14 ಕೆರೆಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಅಂತರ್ಜಲ ಭರ್ತಿ ಆಗಿ ಬೋರ್ ವೆಲ್ ಗಳಿಗೆ ಮರುಜೀವ ಬರುತ್ತದೆ. ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಬೇಕಾದಷ್ಟು ಹಣವನ್ನು ಸರ್ಕಾರ ಮತ್ತು ಬಿಬಿಎಂಪಿ ಒದಗಿಸುತ್ತಿದೆ. ಪ್ರತಿ ದಿನ ಅಧಿಕಾರಿಗಳು ಸಭೆ ನಡೆಸಿ ವಾರಕ್ಕೊಮ್ಮೆ ಕ್ರಿಯಾಯೋಜನೆ ಸಿದ್ದಪಡಿಸುತ್ತಾರೆ. ಭವಿಷ್ಯದಲ್ಲಿ ಎಂಥಾದ್ದೇ ಸಂದರ್ಭದಲ್ಲೂ ನೀರಿನ ಕೊರತೆ ಆಗದಂತೆ ತಜ್ಞರ ಸಮಿತಿಯನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ದೂರು ಬಂದರೆ BBMP, BWSSB ನವರು ಹೊಣೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಬೆಂಗಳೂರಿಗೆ 500 MLD ನೀರು ಕೊರತೆ ಇದೆ. ಈ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಸಿಎಂ ಹೇಳಿದರು.

ಬೋರ್ ವೆಲ್ ಗಳ ಮೇಲೆ ಅವಲಂಬಿತ ಜನರಿಗೆ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. 1700 ನೀರಿನ ಟ್ಯಾಂಕರ್ ನೋಂದಣಿ ಆಗಿವೆ. ಮಾಲ್‌ಗಳು ಸೇರಿ ಖಾಸಗಿಯಾಗಿ ಇರುವ ಬೋರ್ ವೆಲ್‌ಗ
ಳಿಂದ ಟ್ಯಾಂಕರ್ ತುಂಬಿಸಿ ನೀರು ಸರಬರಾಜು ಮಾಡಲಾನೀಡಲಾಗಿದೆ. ಎಲ್ಲೂ ನೀರಿಗೆ ತೊಂದರೆ ಆಗದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

ಸಾರ್ವಜನಿಕರು ಕುಡಿಯುವ ನೀರಿನ ದುಂದುವೆಚ್ಚ ಮಾಡಬಾರದು. ಗಾರ್ಡನ್ ಗಳಿಗೆ ಕುಡಿಯುವ ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ಮಳೆನೀರು ಕೊಯ್ಲು, ಬಳಕೆ ನೀರಿನ ಶುದ್ದೀಕರಿಸಿ ಹೆಚ್ಚಿನ ಪ್ರಮಾಣದಲ್ಲಿ ಮರು ಬಳಸುವಂತೆ ಸೂಚಿಸಲಾಗಿದೆ. ಕುಡಿಯಲು ಮತ್ತು ಕೈಗಾರಿಕೆಗಳಿಗೆ ಒಟ್ಟು 2600 ಎಂ.ಎಲ್. ಡಿ. ನೀರು ಅಗತ್ಯವಿದೆ. ಇದರಲ್ಲಿ 1450 ಎಂ.ಎಲ್. ಡಿ. ನೀರು ಕಾವೇರಿ ನದಿಯಿಂದ ದೊರೆಯುತ್ತಿದೆ. 650 ಎಂ ಎಲ್ ಡಿ ನೀರು ಕೊಳವೆ ಬಾವಿಯಿಂದ ದೊರೆಯುತ್ತಿದ್ದು, 500 ಎಂ.ಎಲ್ ಡಿ ನೀರಿನ ಕೊರತೆ ಇದೆ. ಮುಖ್ಯವಾಗಿ ಕೊಳೆಗೆರಿಗಳು, ಎತ್ತರದ ಪ್ರದೇಶಗಳು ಹಾಗೂ ಬಿಬಿಎಂಪಿ ಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಸಮಸ್ಯೆ ಆಗದಂತೆ ಸೂಚಿಸಲಾಗಿದೆ ಎಂದರು.

ನೀರಿನ ದುರುಪಯೋಗ ತಡೆಗಟ್ಟಲು ಸೂಚಿಸಲಾಗಿದ್ದು, ಈ ಬಗ್ಗೆ 143 ಟಾಸ್ಕ್ ಫೋರ್ಸ್ ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪ್ರಮಾಣ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಕೇಂದ್ರೀಯ ಸಹಾಯವಾಣಿ ಸಂಖ್ಯೆ 1916 ಹಾಗೂ ವಾಟ್ಸಾಪ್ ಮೂಲಕ ದೂರು ದಾಖಲಿಸಬಹುದು. ಈ ದೂರುಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸೂಚಿಸಲಾಗಿದೆ. ಬೆಂಗಳೂರು ನಗರದ ಪ್ರಮುಖ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಸೂಚಿಸಲಾಯಿತು ಎಂದು ರಾಜ್ಯ ರಾಜಧಾನಿಯ ನೀರಿನ ಸಮಸ್ಯೆ ಬಗ್ಗೆ ಸಿಎಂ ಹೇಳಿದರು.

ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಬಗ್ಗೆ ಇದೇ ಸಂದರ್ಭ ಪತ್ರಕರ್ತರು ಕೇಳಿದ್ದು, ಬರಗಾಲ ಬಂದು ಐದು ತಿಂಗಳಾಯ್ತು. ಮೋದಿಯವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಒಂದೇ ಒಂದು ಪೈಸೆ ಹಣ ಕೊಟ್ಟಿಲ್ಲ. ಏಕೆ? ಎಂದು ಸಿಎಂ ಪ್ರತಿಕ್ರಿಯಿಸಿದರು.

18171 ಕೋಟಿ ಬರ ಪರಿಹಾರ ಹಣ ಕೇಳಿದ್ವಿ . ಒಂದು ರೂಪಾಯಿಯನ್ನೂ ಕೊಡಲಿಲ್ಲ, 48 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಆಗಿದೆ. ಬರ ಪರಿಹಾರ ಕೊಡಿ ಅಂದ್ವಿ ಕೊಡಲಿಲ್ಲ. ಮತ್ತೆ ಮೋದಿಯವರಿಗೆ “ನಮ್ಮಲ್ಲಿ ಹಣ ಇಲ್ಲ” ಎಂದು ಆರೋಪಿಸುವ ಯಾವ ನೈತಿಕತೆ ಇದೆ ಎಂದು ಸಿಎಂ ಪ್ರಶ್ನಿಸಿದರು.

ಕೇಂದ್ರದಿಂದ ನಯಾಪೈಸೆ ಬರದಿದ್ದರೂ ನಾವು ರಾಜ್ಯ ಬೊಕ್ಕಸದಿಂದಲೇ ರೈತರ ಖಾತೆಗೆ ಬರ ಪರಿಹಾರ ಹಾಕಿದ್ದೇವೆ. ಬರಗಾಲದಲ್ಲಿ ನರೇಗಾ ದಿನಗಳನ್ನು ಹೆಚ್ಚಿಸಿ ಎಂದು ಕೇಳಿದ್ವಿ. ಇವತ್ತಿನವರೆಗೂ ಮಾಡಿಲ್ಲ ಎಂದು ತಿಳಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಅಂದರೆ ಕೇವಲ GST ತಗೊಳೋಕೆ, ತೆರಿಗೆ ಸಂಗ್ರಹಿಸಿ ತಮ್ಮಲ್ಲಿ ಇಟ್ಟುಕೊಂಡು ರಾಜ್ಯಗಳಿಗೆ ಅನ್ಯಾಯ ಮಾಡೋಕೆ ಮಾತ್ರ ಇರೋದಾ ಎಂದು ಪ್ರಶ್ನಿಸಿದರು‌.

ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ, ಅವರು ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ. ಜನರ ಕೆಲಸ ಮಾಡಿದ್ದೇವೆ. ಜನರ ಭಾವನೆಗಳನ್ನು ಕೆರಳಿಸಿ ಅವರಿಗೆ ದ್ರೋಹ ಆಗಿಲ್ಲ. ಹೀಗಾಗಿ ನಾವು ಕನಿಷ್ಠ 20 ಲೋಕಸಭಾ ಸ್ಥಾನ ಗೆಲ್ತೀವಿ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ರಾಮ ಮತ್ತು ಮೋದಿ ಹೆಸರಲ್ಲಿ ಚುನಾವಣೆಗೆ ಹೋಗ್ತೀವಿ ಎನ್ನುವ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮೋದಿ ಪ್ರಚಾರದ ಫಲ ಇಷ್ಟೆ ಎಂದರು.



Join Whatsapp