ಬಿಜೆಪಿ ಬಗ್ಗೆ ನಾಯಕರ ಅಸಮಾಧಾನ ಸ್ಫೋಟಕ್ಕೆ ವೇದಿಕೆಯಾದ ಜೆಡಿಎಸ್ ಸಭೆ

Prasthutha|

ಬೆಂಗಳೂರು: ‌ ಜೆಡಿಎಸ್ ಪಕ್ಷದ ಸಭೆಯಲ್ಲಿ ಚುನಾವಣಾ ಉಸ್ತುವಾರಿ, ಸಹ ಉಸ್ತುವರಿಗಳು ಹಾಗೂ ಕೋರ್ ಕಮಿಟಿ ಸದಸ್ಯರು ಬಿಜೆಪಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಪ್ಪತ್ತು ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಾಗ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲು ಬಿಜೆಪಿ ವರಿಷ್ಠರು ಮೀನಾಮೇಷ ಎಣಿಸುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

- Advertisement -

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಕೋರ್ ಕಮಿಟಿ ಸದಸ್ಯರು ಹಾಗೂ ಚುನಾವಣಾ ಉಸ್ತುವಾರಿ, ಸಹ ಉಸ್ತುವಾರಿಗಳ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿಯೇ ನಮ್ಮನ್ನು, ನಮ್ಮ ಪಕ್ಷವನ್ನು ನಿರ್ಲಕ್ಷ್ಯ ಮಾಡುತ್ತಿದೆ ಬಿಜೆಪಿ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ. ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಬಿಜೆಪಿ. ಈ ಬಗ್ಗೆ ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ತಮ್ಮ ಬೇಸರವನ್ನು ತೋಡಿಕೊಂಡರು.

- Advertisement -

ಸಭೆಯಲ್ಲಿ ಒಬ್ಬೊಬ್ಬರಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಿದ್ದು, ಬಿಜೆಪಿ‌ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದಿದ್ದಾರೆ.

ಆರಂಭದಲ್ಲಿಯೇ ಹೀಗಾದರೆ ಮುಂದೇನು? ಇದು ಪಕ್ಷಕ್ಕೆ ಮಾರಕ. ರಾಜ್ಯದ 18 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಇದೆ. 3% ರಿಂದ 4% ರಷ್ಟು ಜೆಡಿಎಸ್ ಮತಗಳು ಮೈತ್ರಿ ಅಭ್ಯರ್ಥಿಗೆ ಬಂದರೆ 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ ಎಂದು ಅಂಕಿ ಅಂಶ ಇಟ್ಟುಕೊಂಡು ವರಿಷ್ಠರ ಮೇಲೆ ಒತ್ತಡ ಹೇರಿದರು ಮುಖಂಡರು.

ರಾಜ್ಯಕ್ಕೆ ಪ್ರಧಾನಿ ಬರುತ್ತಿದ್ದಾರೆ. ಭಾಷಣ ಮಾಡಿಕೊಂಡು ಹೋಗುತ್ತಿದ್ದಾರೆ. ನಮ್ಮ ಪಕ್ಷವನ್ನು ಸ್ಥಳೀಯ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿಗಳ ಸಭೆಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಕರೆಯಬೇಕಲ್ಲವೇ? ಕಲಬುರಗಿ ಸಭೆಗೂ ಜೆಡಿಎಸ್ ಸ್ಥಳೀಯ ಮುಖಂಡರನ್ನು ಕರೆದಿಲ್ಲ, ಅವರೇ ಮಾಡಿಕೊಂಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ಶಾಸಕರು, ಮಾಜಿ ಶಾಸಕರಿಗೆ ಮಾಹಿತಿ ಕೊಟ್ಟಿಲ್ಲ. ಶಿವಮೊಗ್ಗ ಸಭೆಗೂ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಕರೆಯಬಹುದಿತ್ತು. ಶಿವಮೊಗ್ಗ ಸಭೆಗೂ ನಮ್ಮ ನಾಯಕರನ್ನು ಕರೆದಿಲ್ಲ ಎಂದು ಜೆಡಿಎಸ್ ಮುಖಂಡರು ಸಿಟ್ಟು ತೋಡಿಕೊಂಡಿದ್ದಾರೆ.



Join Whatsapp