ಚುನಾವಣಾ ಬಾಂಡ್ ಕೊಳಕು ಸಿದ್ದರಾಮಯ್ಯ ಸರ್ಕಾರಕ್ಕೂ ಮೆತ್ತಿಕೊಂಡಿದೆ: ಅಬ್ದುಲ್ ಮಜೀದ್

Prasthutha|

1200 ಕೋಟಿ ಬಾಂಡ್ ಖರೀದಿಸಿರುವ ಮೇಘಾ ಕಂಪನಿಗೆ ಸರ್ಕಾರ 1787 ಕೋಟಿ ಲಾಭ ನೀಡುವ ಗುತ್ತಿಗೆ ನೀಡಿದೆ.

- Advertisement -

ಬೆಂಗಳೂರು: ಚುನಾವಣಾ ಬಾಂಡ್ ರಾಡಿಯಲ್ಲಿ ಬಿಜೆಪಿ ಅತಿಹೆಚ್ಚು ಕೊಳಕನ್ನು ಮೆತ್ತಿಕೊಂಡಿರಬಹುದು. ಆದರೆ, ಕಾಂಗ್ರೆಸ್ ಕೈ ಏನೂ ಸ್ವಚ್ಛವಾಗಲಿಲ್ಲ. ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ 1200 ಕೋಟಿ ರೂ. ಬಾಂಡ್ ಖರೀದಿಸಿರುವ ಮೇಘಾ ಕಂಪನಿಗೆ 1787 ಕೋಟಿ ರೂ. ಲಾಭ ನೀಡುವ ಗುತ್ತಿಗೆ ನೀಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಮೂಲಕ ಕಾರ್ಪೊರೇಟ್ ಕಂಪನಿಗಳಿಂದ ಬಿಜೆಪಿ 6060 ಕೋಟಿ ರೂ. ದೇಣಿಗೆಯನ್ನು ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಕಾರಣದಿಂದ ಈ ಎಲ್ಲಾ ಕೊಳಕು ಹೊರ ಬರುತ್ತಿವೆ. ಆದರೆ ವಿಪಕ್ಷಗಳು, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಈ ವಿಚಾರದಲ್ಲಿ ಸಾಚಾ ಏನೂ ಅಲ್ಲ. ಕಾಂಗ್ರೆಸ್ ಕಳೆದ ಐದು ವರ್ಷಗಳ ಅವಧಿಯಲ್ಲಿ 1609.50 ಕೋಟಿ ರೂಪಾಯಿಗಳನ್ನು ಚುನಾವಣಾ ಬಾಂಡ್ ಮೂಲಕ ಪಡೆದುಕೊಂಡಿದೆ. ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿ 1200 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಖರೀದಿಸಿದೆ. ಅದೇ ಕಂಪನಿಗೆ ಕರ್ನಾಟಕದ ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾಸ್ ಪೈಪ್ ಲೈನ್ ಗುತ್ತಿಗೆಯನ್ನು ನೀಡಿದ್ದು, ಈ ಗುತ್ತಿಗೆಯ ಮೂಲಕ ಆ ಕಂಪನಿ ಸುಮಾರು 1787 ಕೋಟಿ ರೂ. ಲಾಭ ಮಾಡಿಕೊಳ್ಳಲಿದೆ. ಚುನಾವಣಾ ಬಾಂಡ್‌ಗೆ ಪ್ರತಿಯಾಗಿ ಸಿದ್ದರಾಮಯ್ಯ ಸರ್ಕಾರ ಈ ಮೇಘಾ ಕಂಪನಿಗೆ ಈ ಗುತ್ತಿಗೆಯನ್ನು ನೀಡಿರುವಂತೆ ಕಾಣುತ್ತಿದೆ ಎಂದು ಮಜೀದ್ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಮೇಘಾ ಕಂಪನಿಗೆ ಲಾಭದ ಪ್ರಮಾಣ ಹೆಚ್ಚಿಸಲು ಯೋಜನೆಯ ನೀತಿಯಲ್ಲಿ ಕಂಪನಿಗೆ ಅನುಕೂಲವಾಗುವಂತೆ ಬದಲಾವಣೆ ಮಾಡಲಾಗಿದೆ. ನೈಸರ್ಗಿಕ ಅನಿಲ ಸರಬರಾಜು ಪೈಪ್ ಅಳವಡಿಕೆಗೆ ಈ ಮೊದಲು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿ ಮೀಟರ್‌ಗೆ 1,900 ರೂಪಾಯಿ ರೂ. ಮತ್ತು ರಾಜ್ಯದ ಇತರ ಭಾಗಗಳಲ್ಲಿ 1,857 ರೂ. ಇತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಮೀಟರ್‌ಗೆ 1 ರೂಪಾಯಿಗೆ ಇಳಿಸಿದೆ. ಇದರಿಂದ ಮೇಘಾ ಕಂಪನಿಗೆ ಪ್ರತಿ ಕಿ ಮೀಗೆ 18.56 ಲಕ್ಷ ರೂಪಾಯಿಗಳನ್ನು ಪಾವತಿಸುವ ಜಾಗದಲ್ಲಿ ಕೇವಲ 1000 ರೂಪಾಯಿ ಪಾವತಿಸಿದರೆ ಸಾಕಾಗಿದೆ. ಕಾಂಗ್ರೆಸ್ ಸರಕಾರಕ್ಕೆ ಈ ಕಂಪನಿಯ ಮೇಲೆ ಪ್ರೀತಿ ಹೆಚ್ಚು. 2015 ರಲ್ಲಿ ಸಿದ್ದರಾಮಯ್ಯ ಅವರ ಮೊದಲ ಸರ್ಕಾರ ಇದ್ದಾಗಲೂ ಸಹ ಈ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು ಮತ್ತು ಈಗ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ಅವರು ವಿಶೇಷ ಮುತುವರ್ಜಿ ವಹಿಸಿ ಮೇಘಾ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಇಲ್ಲೊಂದು ‘ಕೊಡು ಕೊಳ್ಳುವ ವ್ಯವಹಾರ’ ನಡೆದಿರುವ ಎಲ್ಲ ಲಕ್ಷಣಗಳಿರುವುದರಿಂದ ಸರ್ಕಾರ ಇದರ ಸ್ಪಷ್ಟನೆ ನೀಡಬೇಕು ಮತ್ತು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಮಜೀದ್ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp