ಪಾಲಕ್ಕಾಡ್: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧರೊಬ್ಬರಿಗೆ ಕೇರಳ ನ್ಯಾಯಾಲಯ ಒಟ್ಟು 83 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆದರೆ, ಗರಿಷ್ಠ 40 ವರ್ಷಗಳವರೆಗೆ ಮಾತ್ರ ಅಪರಾಧಿ ಜೈಲಿನಲ್ಲಿ ಇರಬಹುದಾಗಿರುವುದರಿಂದ ಈ ಪ್ರಕರಣದ ಅಪರಾಧಿಗೂ ಅದು ಅನ್ವಯವಾಗಲಿದೆ ಎಂದೂ ಕೋರ್ಟ್ ಹೇಳಿದೆ.
ಪಟ್ಟಾಂಬಿ ತ್ವರಿತ ಗತಿ ವಿಶೇಷ ನ್ಯಾಯಾಲಯ (ಎಫ್ಐಎಸ್ಸಿ)ದ ನ್ಯಾಯಾಧೀಶ ರಾಮು ರಮೇಶ್ ಚಂದ್ರ ಭಾನು ಪ್ರಕರಣದ ವಿಚಾರಣೆ ನಡೆಸಿದ್ದು, ಅಪರಾಧಿಗೆ ಜೈಲು ಶಿಕ್ಷೆಯೊಂದಿಗೆ ₹4.3 ಲಕ್ಷ ದಂಡ ವಿಧಿಸಿದ್ದು, ಆ ಹಣವನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ.
ಅಪರಾಧಿ 65 ವರ್ಷದ ವೃದ್ಧ ತನ್ನ ಸಂಬಂಧಿ 16 ವರ್ಷದ ಬಾಲಕಿಗೆ ಆಕೆಯ ಮನೆಯಲ್ಲೇ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.
‘ಸಂತೃಸ್ತ ಬಾಲಕಿ ತನ್ನ ಮೇಲೆ ದೌರ್ಜನ್ಯವಾಗುತ್ತಿರುವುದರ ಬಗ್ಗೆ ಶಿಕ್ಷಕಿಯೊಬ್ಬರಿಗೆ ತಿಳಿಸಿದ್ದಳು. ಬಳಿಕ ಪ್ರಕರಣವು ಮಕ್ಕಳ ಸೇವಾ ಇಲಾಖೆಯ ಗಮನಕ್ಕೆ ಬಂದಿದ್ದು, ಅವರ ಮಾಹಿತಿಯ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.