►‘ಕಾಂಗ್ರೆಸ್ ಗೆದ್ದರೆ ಸಂವಿಧಾನವನ್ನು ರಕ್ಷಣೆ ಮಾಡಲಿದೆ’
ಮಂಗಳೂರು: ನಳಿನ್ ಕುಮಾರ್ ಕಟೀಲ್ ನಂಬರ್ ಒನ್ ಅಲ್ಲ, ಅನ್ಫಿಟ್ ಸಂಸದ. ಅವರು ಏನೂ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಅವರನ್ನು ಬದಲಾವಣೆ ಮಾಡಿದ್ದಾರೆ. ಅವರೇನು ಕೆಲಸ ಮಾಡಿಲ್ಲ ಎಂದು ಇದರಲ್ಲೇ ಅರ್ಥ ಆಗುತ್ತೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಪರವಾದ ವಾತಾವರಣ ಕಂಡುಬರುತ್ತಿದೆ. ಶೀಘ್ರದಲ್ಲೇ ದ.ಕ ಲೋಕಸಭಾ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ 18 ರಿಂದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕೈಹಿಡಿಯಲಿವೆ. ಮಹಿಳೆಯರಿಗೆ ಆರ್ಥಿಕ ಸಾಮಾಜಿಕ ಜೀವನ ಮಾಡುವ ಅವಕಾಶ ನೀಡಲಾಗಿದೆ. ರಾಜ್ಯದ ಮಹಿಳಾ ಸಮುದಾಯಕ್ಕೆ ಸಮಾಧಾನ ಸಿಕ್ಕಿದೆ ಎಂದರು.
ಸಂವಿಧಾನ ಬದಲಾವಣೆ ಮಾಡಲು ಮೋದಿಯವರಿಗೆ 400ಕ್ಕೂ ಹೆಚ್ಚು ಸೀಟ್ ಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನಸಮುದಾಯಕ್ಕೆ, ಬಡವರಿಗೆ ತೊಂದರೆ ಮಾಡುವ ಉದ್ದೇಶದಿಂದ ಸಂವಿಧಾನ ಬದಲಾವಣೆಗೆ ಮುಂದಾಗಿದ್ದಾರೆ ಎಂದರು. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಬಹುದು, ಸಂವಿಧಾನ ರಕ್ಷಣೆಯಾಗಬೇಕಾದರೆ ಎಲ್ಲಾ ವರ್ಗದ ಜನರು ಕಾಂಗ್ರೆಸ್ಗೆ ಬೆಂಬಲಿಸಬೇಕುಕಾಂಗ್ರೆಸ್ ಗೆದ್ದರೆ ಸಂವಿಧಾನವನ್ನು ರಕ್ಷಣೆ ಮಾಡಲಿದೆ, ಸಂವಿಧಾನ ರಕ್ಷಣೆಯಾದರೆ ಜನರು ರಕ್ಷಣೆಯಾಗುತ್ತೆ ಎಂದರು.
ಮೋದಿ ಸರಕಾರ ಚುನಾವಣಾ ಬಾಂಡ್ನಲ್ಲಿ ಭ್ರಷ್ಟಾಚಾರ ಮಾಡಿದೆ. ದೇಣಿಗೆ ಕೊಟ್ಟವರ ಬಾಂಡ್ಗಳಲ್ಲಿ 50% ಬಾಂಡ್ಗಳು ಬಿಜೆಪಿಗೆ ಹೋಗಿದೆ, ಕಂಪೆನಿಗಳ ಮೇಲೆ ಇ.ಡಿ ದಾಳಿ ನಡೆಸಿ ಅವರನ್ನು ಹೆದರಿಸಿ ಬೆದರಿಸಿ ಬಾಂಡ್ ಮೂಲಕ ದೇಣಿಗೆ ಪಡೆದಿದ್ದಾರೆ.ಬಾಂಡ್ ಕೊಟ್ಟ ಕಂಪೆನಿಗಳಿಗೆ ಬಿಜೆಪಿ ಸರಕಾರ ಸಾವಿರಾರು ಕೋಟಿಗಳ ಯೋಜನೆಗಳ ಗುತ್ತಿಗೆ ನೀಡಲಾಗಿದೆ, ಇದು ಕಿಕ್ ಬ್ಯಾಕ್ ಎಂದು ಆರೋಪಿಸಿದರು. ಚುನಾವಣಾ ಬಾಂಡ್ಗಳ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ನ ಹಾಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.