ಬೆಂಗಳೂರು: ನಾನಿದನ್ನು ನಿರೀಕ್ಷಿಸಿರಲಿಲ್ಲ. ಹೆಣ್ಮಗಳಿಗೆ ಸಹಾಯ ಮಾಡಿದ್ದೆ. ಅನ್ಯಾಯವಾಗಿದೆ ಎಂದು ಬಂದಿದ್ದಾಕೆಗೆ ನ್ಯಾಯ ಒದಗಿಸಿ ಎಂದು ಪೊಲೀಸ್ ಕಮಿಷನರ್ ಬಳಿ ಕಳುಹಿಸಿದ್ದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ತನ್ನ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ಬಗ್ಗೆ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ನನ್ನ ಮೇಲೆ ಹೆಣ್ಣು ಮಗಳು ಕಂಪ್ಲೇಟ್ ಕೊಟ್ಟಿದ್ದಾರೆ ಅನ್ನೋ ವಿಷಯ ಗೊತ್ತಾಯ್ತು. ಒಬ್ಬ ತಾಯಿ ಮಗಳು ಅನೇಕ ಸಲ ಇಲ್ಲಿ ಬಂದು ಹೋಗಿತ್ತಿದ್ದರು. ನಾವು ಹತ್ತಿರ ಸೇರಿಸಿರಲಿಲ್ಲ. ಆದರೆ ಅದೊಂದು ಸಲ ಅವರು ಕಣ್ಣೀರು ಹಾಕುತ್ತಿದ್ದಾರೆಂದು ತಾಯಿ ಹಾಗೂ ಮಗಳನ್ನು ಒಳಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ಸಮಸ್ಯೆ ಏನು ಎಂದು ಕೇಳಿದ್ದೆ. ನನಗೆ ತುಂಬಾ ಅನ್ಯಾಯ ಆಗಿದೆ ಎಂಬಿತ್ಯಾದಿಯಾಗಿ ಹೇಳಿದ್ದರು.
ಹೀಗಿರುವಾಗ ಇದೇನು ಸರಿ ಕಾಣಿಸ್ತಿಲ್ಲ, ಆರೋಗ್ಯ ಸರಿ ಇಲ್ಲದಂತೆ ಕಾಣಿಸಿತು. ಹೆಚ್ಚು ಮಾತನಾಡಿದರೆ ಉಪಯೋಗವಿಲ್ಲವೆಂದು ನಾನವರನ್ನು ಪೊಲೀಸ್ ಕಮಿಷನರ್ ಬಳಿ ಕಳುಹಿಸಿದೆ. ಅವರು ಈ ಬಗ್ಗೆ ಹೆಚ್ಚಿನ ವಿಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೀಗ ಇದನ್ನು ಬೇರೆ ರೀತಿಯಾಗಿ ತಿರುಗಿಸಿ ಎಫ್ಐಆರ್ ಮಾಡಿದ್ದಾರೆಂದು ತಿಳಿದು ಬಂತು. ಅದನ್ನು ಕಾನೂನು ಅನ್ವಯ ಎದುರಿಸ್ತೀನಿ ಎಂದರು.