ಬೆಂಗಳೂರು: ದೇಶದ ಜನರ ಅಪಾರ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ-2019ರ ಜಾರಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI) ಕೇಂದ್ರ ಸಮಿತಿ ಸಂಪೂರ್ಣವಾಗಿ ವಿರೋಧಿಸುತ್ತದೆ. ಹಾಗೆಯೇ, ದೇಶದ , ದುಡಿಯು ವರ್ಗ ಹಾಗೂ ಸಂವಿಧಾನದ ಹಿತಾಸಕ್ತಿಗೆ ಧಕ್ಕೆ ತರುವ ಸಿಎಎ ನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಹೋರಾಟ ರೂಪಿಸಲು ಎಲ್ಲಾ ಕಾರ್ಮಿಕರಿಗೆ ಹಾಗೂ ಕಾರ್ಮಿಕ ಸಂಘಟನೆಗಳಿಗೆ ಈ ಮೂಲಕ ಮನವಿ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಆರ್. ಮಾನಸಯ್ಯ, ಇಂದು ಮುಸ್ಲಿಮರಿಗೆ ಪೌರತ್ವ ನಿರಾಕರಿಸುವ, ಮುಸ್ಲಿಂ ವಿರೋಧಿ ದ್ವೇಷವನ್ನು ಯೋಜನೆ ಬದ್ಧವಾಗಿ ಹರಡುವ, ಈ ಮೂಲಕ ಬಹುಸಂಖ್ಯಾತ ಹಿಂದೂಗಳ ಹೆಸರಲ್ಲಿ ಬ್ರಾಹ್ಮಣವಾದಿ ರಾಜಕಾರಣ ಮಾಡುವ ಹಿಂದುತ್ವ ಫ್ಯಾಸಿಸ್ಟ್ ಕುತಂತ್ರವನ್ನು ಭಾರತದ ಜನ ಈಗಲಾದರೂ ಅತ್ಯಂತ ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕೆಂದು ವಿನಂತಿಸುತ್ತದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಮುಸ್ಲಿಮರು ಹಾಗೂ ಮುಸ್ಲಿಮೇತರರು ಭಾರತೀಯರು. ದೇಶ ಕಟ್ಟಿ ದೇಶ ನಡೆಸುವ ದಲಿತ ಹಿಂದುಳಿದ ವರ್ಗದವರು ಭಾರತೀಯರು. ನಮ್ಮ ಬಹುಧರ್ಮಿಯ ಬಹು ಜನಾಂಗೀಯ ಭಾರತವನ್ನು ಕೆಡವಿ, ಹಿಂದೂ ರಾಷ್ಟ್ರ ಕಟ್ಟುವ ಆರ್ ಎಸ್ ಎಸ್ ನ ಕುತಂತ್ರಕ್ಕೆ ಅವಕಾಶ ಸಿಗದಂತೆ ನೋಡಿಕೊಳ್ಳುವುದು ಕಾರ್ಮಿಕ ವರ್ಗದ ರಾಷ್ಟ್ರೀಯ ಕರ್ತವ್ಯವಾಗಿದೆ. ಕಾರ್ಮಿಕರೇ ಭಾರತ ದೇಶದ ನಿರ್ಮಾಣ ಕಾರಕರು. ಹಾಗೆಯೇ,ರಾಜ್ಯದಿಂದ ರಾಜ್ಯಕ್ಕೆ ದೇಶದಿಂದ ದೇಶಕ್ಕೆ ದುಡಿಮೆಗಾಗಿ ವಲಸೆ ಹೋಗುವ ಕಾರ್ಮಿಕರು ಪ್ರಪಂಚದ ಪೌರತ್ವಕ್ಕೆ ಯೋಗ್ಯರಾಗಿದ್ದಾರೆ ಎಂಬ ಜಾಗತಿಕ ಸತ್ಯವನ್ನು ಕಾರ್ಮಿಕರು ಕೂಗಿ ಹೇಳಬೇಕಾಗಿದೆ.
ಆದ್ದರಿಂದ, ಆರ್ ಎಸ್ ಎಸ್ ಬಿಜೆಪಿ ಒಡ್ಡಿದ ಈ ಸವಾಲನ್ನು, ದುಡಿಯು ವರ್ಗ ಹಾಗೂ ದಮನಿತ ಜನರು ಐಕ್ಯತೆಯಿಂದ ಹೋರಾಡುವದರ ಮೂಲಕ, ಬಂಡವಾಳವಾದಿ ಬ್ರಾಹ್ಮಣ ವಾದಿ ಹಿಂದೂರಾಷ್ಟ್ರ ಯೋಜನೆಯನ್ನು ಸೋಲಿಸಲು ಮುಂದಾಗ ಬೇಕೆಂದು ಈ ಮೂಲಕ ಕರೆ ನೀಡಲಾಗಿದೆ ಎಂದಿದ್ದಾರೆ.