ಬೆಂಗಳೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕದಲ್ಲಿರುವ ಸಂಸದ ಪ್ರತಾಪ್ ಸಿಂಹ ಕೊನೆಯ ಯತ್ನವಾಗಿ ಅಲ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಮೈಸೂರಿನಿಂದ ಬೆಂಗಳೂರಿನ ಸದಾಶಿವನಗರದ ಅಪಾರ್ಟ್ಮೆಂಟ್ ಒಂದರಲ್ಲಿ ರಾಧಾಮೋಹನ್ ಅವರನ್ನು ಭೇಟಿಮಾಡಿದರು.
ಭೇಟಿಯ ಸಂದರ್ಭದಲ್ಲಿ ಬಿಜೆಪಿಯ ಕೆಲವು ಪ್ರಮುಖರಷ್ಟೇ ಇದ್ದರು. ಭೇಟಿ ಯ ಬಳಿಕ ಪ್ರತಾಪ್ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಅವರಿಗೆ ಟಿಕೆಟ್ ಕೈ ತಪ್ಪುವ ಅನುಮಾನವನ್ನು ಬಲಪಡಿಸಿದೆ.
ಚುನಾವಣಾ ತಯಾರಿಗಾಗಿ ಬೆಂಗಳೂರಿಗೆ ಬಂದಿರುವ ರಾಧಾಮೋಹನ್ ಸದಾಶಿವನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಹಲವು ಗೌಪ್ಯ ಸಭೆಗಳನ್ನು ಅಲ್ಲಿಯೇ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.