ಲಖನೌ: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೆಲವು ವಿರೋಧ ಪಕ್ಷಗಳು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ.
‘ಬಿಎಸ್ ಪಿ ಚುನಾವಣಾ ಮೈತ್ರಿ ಅಥವಾ ತೃತೀಯ ರಂಗ ರಚಿಸುವ ಕುರಿತು ಸುಳ್ಳು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಈ ವಿಚಾರದ ಬಗ್ಗೆ ಜನರು ಜಾಗರೂಕರಾಗಿರಬೇಕು’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಎಸ್ಪಿ ತನ್ನ ಸ್ವಂತ ಬಲದ ಮೇಲೆ ಸಂಪೂರ್ಣ ಸಿದ್ಧತೆ ಮತ್ತು ಶಕ್ತಿಯೊಂದಿಗೆ ದೇಶದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದೆ ಎಂದು ಮಾಯಾವತಿ ಬರೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಮೈತ್ರಿ ಅಥವಾ ತೃತೀಯ ರಂಗ ರಚನೆಯ ಬಗ್ಗೆ ವದಂತಿಗಳನ್ನು ಹರಡುವುದು ಸಂಪೂರ್ಣ ಸುಳ್ಳು ಮತ್ತು ತಪ್ಪು ಸುದ್ದಿಯಾಗಿದೆ. ಇಂತಹ ಕಿಡಿಗೇಡಿ ಸುದ್ದಿಗಳನ್ನು ನೀಡಿ ಮಾಧ್ಯಮಗಳು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಾರದು. ಜನರೂ ಎಚ್ಚರಿಕೆ ವಹಿಸಬೇಕು ಎಂದರು.