ಬೆಂಗಳೂರು: ರಾಜ್ಯದಲ್ಲಿ ಶೇ.60ರಷ್ಟು ಕನ್ನಡ ಇರುವ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ, ವಿಧಾನಸಭಾ ಕ್ಷೇತ್ರವಾರು ಖುದ್ದು ಜಿಲ್ಲಾಧಿಕಾರಿಗಳು ಭೇಟಿ ನೀಡಿ, ನಾಮಫಲಕ ಅಳವಡಿಕೆ ಪ್ರಗತಿ ಬಗ್ಗೆ ಮಾರ್ಚ್ 12ರಂದು ವರದಿ ನೀಡಬೇಕು” ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ದ ಅನ್ವಯ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಲೇಬೇಕು. ಅದಕ್ಕೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಗಳಲ್ಲಿನ ಪ್ರಗತಿ ಕುರಿತಂತೆ ಖುದ್ದು ಜಿಲ್ಲಾಧಿಕಾರಿಗಳೇ ಪರಿಶೀಲನೆ ನಡೆಸಬೇಕು. ನಿಮ್ಮ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಪ್ರಗತಿಯನ್ನು ಅವಲೋಕಿಸಬೇಕು. ಮಾರ್ಚ್ 12ರೊಳಗೆ ಪರಿಶೀಲನೆ ನಡೆಸಿ, ವಿಧೇಯಕ ಅನುಷ್ಠಾನದ ಕುರಿತು ವರದಿ ನೀಡಬೇಕು” ಎಂದು ಹೇಳಿದರು.