ಹಂದಿಗಳ ಕಾಟಕ್ಕೆ ಬೇಸತ್ತು ಅರೆ ಬೆತ್ತಲೆ ಪ್ರತಿಭಟನೆ: ಸ್ಥಳಕ್ಕೆ ಶಾಸಕ ಭೇಟಿ

Prasthutha|

ರಟ್ಟೀಹಳ್ಳಿ: ಹಂದಿಗಳ ಕಾಟಕ್ಕೆ ರೋಷಿ ಹೋದ ಪಟ್ಟಣದ ವಿರೇಶ ಬೆಣ್ಣಿ ಎಂಬವರು ಪಟ್ಟಣ ಪಂಚಾಯ್ತಿ ಎದುರು ಅರೆಬೆತ್ತಲೆಯಾಗಿ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

- Advertisement -

ನೀರನ್ನು ಕುಡಿಯದೆ ಬೆಳಿಗ್ಗೆಯಿಂದ ಸುಮಾರು ಮಧ್ಯಾಹ್ನ 2 ಗಂಟೆವರೆಗೆ ಅರೆಬೆತ್ತಲೆಯಾಗಿ ಪ್ರತಿಭಟನೆ ಕೈಗೊಂಡಿದ್ದು, ಶಾಸಕ ಯು.ಬಿ. ಬಣಕಾರ ಸ್ಥಳಕಗಕೆ ಭೇಟಿ ನೀಡಿ ತಕ್ಷಣ ಹಂದಿಗಳನ್ನು ಹಿಡಿಸಿ ಬೇರೆಡೆ ಸಾಗಿಸುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಮಾಡಿದರು.

ಪಿಎಸ್‌ಐ ಜಗದೀಶ ಜೆ. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಹಂದಿಗಳ ಮಾಲೀಕರನ್ನು ಕರೆಸಿ ಸಭೆ ನಡೆಸಿ ತಕ್ಷಣ ಪಟ್ಟಣದಲ್ಲಿ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು. ಇಲ್ಲವಾದಲ್ಲಿ ಪಂಚಾಯ್ತಿಯಿಂದ ಹಂದಿಗಳನ್ನು ಹಿಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಮೇಲೆ ವಿರೇಶ ಬೆಣ್ಣಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

- Advertisement -

ಪತ್ನಿ, ಮಕ್ಕಳು ಹಂದಿಗಳ ಕಾಟದಿಂದ ಮನೆಯಿಂದ ಹಿತ್ತಲಕ್ಕೆ ಶೌಚಕ್ಕೆ ಬರಲು ಹೆದರುತ್ತಿದ್ದಾರೆ ಎಂದು ಪ್ರತಿಭಟನೆ ನಿರತರಾಗಿದ್ದ ವಿರೇಶ ಬೆಣ್ಣಿ ಅಳಲು ತೋಡಿಕೊಂಡರು.

ಮಕ್ಕಳು ಹಂದಿಗಳಿಗೆ ಹೆದರಿ ಮನೆಯಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಹಂದಿಗಳು ಹಿತ್ತಲಿಲ್ಲಿ ಮರಿಹಾಕಿದ್ದು, ಓಡಿಸಲು ಹೋದರೆ ಕಚ್ಚಲು ಮೈಮೇಲೆ ಬರುತ್ತವೆ. ಮನೆಯ ಹಿತ್ತಲಿನಲ್ಲಿ ಶೇಖರಿಸಿಟ್ಟ ಜೋಳವನ್ನು ಹಾಳು ಮಾಡಿವೆ ಎಂದು ಪ್ರತಿಭಟನೆ ನಿರತ ವಿರೇಶ ಬೆಣ್ಣಿ ಹೇಳಿದರು.

ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸಮಸ್ಯೆ ಕುರಿತು ಮಾಹಿತಿ ನೀಡಿದ್ದರೂ ಹಂದಿಗಳನ್ನು ಹಿಡಿಸುವ ಪ್ರಯತ್ನವನ್ನು ಮಾಡಲಿಲ್ಲ. ಹಂದಿಗಳ ಕಾಟದಿಂದ ರೋಷಿಹೋದ ನನ್ನ ಪತ್ನಿ ಹಂದಿಗಳನ್ನು ಹಿಡಿಸಿದ ಮೇಲೆಯೇ ಊರಿಗೆ ಬರುತ್ತೇನೆ ಎಂದು ಮಕ್ಕಳೊಂದಿಗೆ ಹೋಗಿದ್ದಾಳೆ. ಹೀಗಾದರೆ ಮಕ್ಕಳ ಶಿಕ್ಷಣದ ಗತಿಯೇನು ಎನ್ನುವಂತಾಗಿದೆ ಎಂದರು.

ಪ್ರತಿಭಟನೆಗೆ ಈರಣ್ಣ ಏಶೆಪ್ಪನವರ ಎಂಬವರೂ ಕೈಜೋಡಿಸಿ ಅರೆಬೆತ್ತಲೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



Join Whatsapp