ಗಾಝಾ: ಗಾಝಾಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ಧದಲ್ಲಿ ಭಾರತ ಮೂಲದ 19 ವರ್ಷದ ಯೋಧನೋರ್ವ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಯೋಧನನ್ನು 19 ವರ್ಷದ ಸಾರ್ಜೆಂಟ್ ಓಜ್ ಡೇನಿಯಲ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 7 ರಂದು ಗಾಜಾಕ್ಕೆ ಅಪಹರಿಸಲ್ಪಟ್ಟ, ಭಾರತ ಮೂಲದ ಸಾರ್ಜೆಂಟ್ ಓಜ್ ಡೇನಿಯಲ್ ಅವರು ಸತ್ತಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಹೇಳಿದ್ದಾರೆ.
ಇದಕ್ಕೂ ಮೊದಲು ಭಾರತೀಯ ಮೂಲದ ಇಸ್ರೇಲಿ ಸೈನಿಕನ ಸಾವು ಡಿಸೆಂಬರ್ 2023 ರಲ್ಲಿ ವರದಿಯಾಗಿತ್ತು. ಮಹಾರಾಷ್ಟ್ರದ ಬೆನೆ ಇಸ್ರೇಲ್ ಸಮುದಾಯದವರಾದ 34 ವರ್ಷ ವಯಸ್ಸಿನ ಸಾರ್ಜೆಂಟ್ ಗಿಲ್ ಡೇನಿಯಲ್ಸ್ ಯುದ್ಧದಲ್ಲಿ ಸಾವನ್ನಪ್ಪಿದ್ದರು. ಅದಕ್ಕೂ ಮೊದಲು ನವೆಂಬರ್ 2023 ರಲ್ಲಿ, 20 ವರ್ಷ ವಯಸ್ಸಿನ ಸಿಬ್ಬಂದಿ ಭಾರತ ಮೂಲದ ಹಲೇಲ್ ಸೊಲೊಮನ್ ಸಹ ಗಾಝಾದಲ್ಲಿ ಹೋರಾಡುತ್ತಿದ್ದಾಗ ಸಾವನ್ನಪ್ಪಿದ್ದರು.
ಇಸ್ರೇಲ್‌ನಲ್ಲಿ ಸುಮಾರು 85,000 ಭಾರತೀಯ ಮೂಲದ ಯಹೂದಿಗಳಿದ್ದಾರೆ. ಅವರಲ್ಲಿ ಕೇರಳದ ಕೊಚ್ಚಿನ್ ಯಹೂದಿಗಳು ಮತ್ತು ಪರದೇಸಿ ಯಹೂದಿಗಳು, ಮುಂಬೈ ಮತ್ತು ಕೋಲ್ಕತ್ತಾದ ಬಗ್ದಾದಿ ಯಹೂದಿಗಳು, ಮಹಾರಾಷ್ಟ್ರದ ಬೆನೆ ಇಸ್ರೇಲ್ ಮತ್ತು ಮಣಿಪುರ ಮತ್ತು ಮಿಜೋರಾಂನ ಬಿನೆ ಮೆನಾಶೆ ಸೇರಿದ್ದಾರೆ.