ಬೆಂಗಳೂರು: ಹೊಸ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ ಜಿಟಿಡಿಸಿಗಳ ಜತೆಗೆ ಹೊಸದಾಗಿ ಇನ್ನಷ್ಟು GTDC ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು.
ನಿರುದ್ಯೋಗ ಯುವಕ-ಯುವತಿಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಯುವ ಸಮೃದ್ಧಿ ಸಮ್ಮೇಳನ’ ಎಂಬ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾಗಿ 10 ವರ್ಷ ಆಯ್ತು. 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ಮೋದಿ ಅವರು ಉದ್ಯೋಗ ಸೃಷ್ಟಿ ಬದಲಾಗಿ ನಿರುದ್ಯೋಗ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರು.
ಇಡೀ ದೇಶದಲ್ಲಿಯೇ ಕರ್ನಾಟಕ ಸರ್ಕಾರ ಬೃಹತ್ ಉದ್ಯೋಗ ಮೇಳ ಏರ್ಪಾಡು ಮಾಡಿದೆ. ಈ ಮೇಳದಲ್ಲಿ ಸಂತೋಷದಿಂದ ಭಾಗಿಯಾಗಿದ್ದೇನೆ. 70 ಸಾವಿರಕ್ಕೂ ಹೆಚ್ಚು ಉದ್ಯೋಗಕಾಕ್ಷಿಗಳು ಭಾಗಿಯಾಗಿದ್ದಾರೆ. ಉದ್ಯೋಗ ಕೊಡಲು ಬಂದ ಉದ್ಯಮಗಳಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.