ಕೀವ್: ರಷ್ಯಾ ಯುದ್ಧದಲ್ಲಿ ಇದುವರೆಗೆ ಉಕ್ರೇನ್‌ನ 31 ಸಾವಿರ ಯೋಧರನ್ನು ಕೊಂದಿದೆ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಇದೇ ಮೊದಲನೆ ಬಾರಿಗೆ ಉಕ್ರೇನ್, ಎರಡು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಈ ಯುದ್ಧದಲ್ಲಿ ಉಕ್ರೇನ್‌ನ 31 ಸಾವಿರ ಸೈನಿಕರು ಸಾವನ್ನಪ್ಪಿದ್ದಾರೆ. ಪುಟಿನ್ ಮತ್ತು ಅವರ ‘ಸುಳ್ಳಿನ ವಲಯ’ ಹೇಳುವಂತೆ 3 ಲಕ್ಷ ಅಥವಾ 1.50 ಲಕ್ಷ ಯೋಧರನ್ನು ನಾವು ಕಳೆದುಕೊಂಡಿಲ್ಲ. ಆದರೆ ಪ್ರತಿಯೊಬ್ಬ ಸೈನಿಕನ ಸಾವು ಕೂಡಾ ನಮಗೆ ಆಗಿರುವ ಬಲುದೊಡ್ಡ ನಷ್ಟ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯುದ್ಧದಲ್ಲಿ ಗಾಯಗೊಂಡಿರುವ ಸೈನಿಕರ ಸಂಖ್ಯೆಯನ್ನು ಬಹಿರಂಗಪಡಿಸುವುದಿಲ್ಲ. ಅದು ರಷ್ಯಾಕ್ಕೆ ಯುದ್ಧ ತಂತ್ರ ರೂಪಿಸಲು ನೆರವಾಗಬಹುದು ಎಂದು ಉಕ್ರೇನ್ ಅಧ್ಯಕ್ಷ ಇದೇ ಸಂದರ್ಭ ಹೇಳಿದರು.