ಗ್ರಾಮಸ್ವರಾಜ್ ಟ್ರಸ್ಟ್‌ನಿಂದ ವಿನೂತನ ಕಾರ್ಯಕ್ರಮ
ಮಂಗಳೂರು: ಗ್ರಾಮ ಸ್ವರಾಜ್ ಟ್ರಸ್ಟ್ (ರಿ) ಮತ್ತು ಸ್ಥಳೀಯ ಆಡಳಿತಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯತ್‌ಗಳು, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ
‘ಹೊಂಬೆಳಕು’ ಎನ್ನುವ ನಾಮಂಕಿತದೊಂದಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು 02-03-2024ನೇ ಶನಿವಾರ ಮಂಗಳೂರು ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಸೇವಾ ಚಟುವಟಿಕೆ ಹಾಗೂ ದಿನನಿತ್ಯದ ಒತ್ತಡಗಳಿಂದ ಪಂಚಾಯತ್ ರಾಜ್ ಹಾಗೂ ನಗರಾಡಳಿತದ ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗೆ ಮಾನಸಿಕ ನೆಮ್ಮದಿ ಹಾಗೂ ಸೌಹಾರ್ದ ಸಂಬಂಧಗಳಿಗೆ ಮಹತ್ವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೊಂಬೆಳಕು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಟ್ರಸ್ಟ್‌ನ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಸಮಿತಿಯ ಗೌರವ ಸಲಹೆಗಾರ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಟ್ರಸ್ಟ್‌ನ ಅಧ್ಯಕ್ಷ ಕೆ. ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಲಾರೆನ್ಸ್ ಡಿಸೋಜ ಮತ್ತು ಖಜಾಂಜಿ ಪ್ರವೀಣ್ ಚಂದ್ರ ಆಳ್ವ ಪೋಸ್ಟರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಮಂಜುನಾಥ್ ಭಂಡಾರಿ ಕಾರ್ಯಕ್ರಮದ ಉದ್ದೇಶ ಮತ್ತು ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಸ್ಪೀಕರ್ ಯು.ಟಿ ಖಾದರ್ ಮತ್ತು ಸಭಾಪತಿ ಬಸವರಾಜ್ ಹೊರಟ್ಟಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಈಗಾಗಲೇ ಸರಕಾರದ ಸುತ್ತೋಲೆಯ ಮೂಲಕ ಉಭಯ ಜಿಲ್ಲೆಗಳ ಎಲ್ಲಾ ಸ್ಥಳೀಯ ಆಡಳಿತಗಳ ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿರುತ್ತದೆ. ಸುಮಾರು 5 ರಿಂದ 6 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆಕರ್ಷಕ ಪಥ ಸಂಚಲನಗಳೊಂದಿಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಯ ಶಾಸಕರುಗಳು ಸಮಾಜದ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಆಕರ್ಷಕ ನಗದು ಬಹುಮಾನಗಳನ್ನು ನೀಡುವುದರ ಜೊತೆಗೆ ಭಾಗವಹಿಸುವ ಸಂಸ್ಥೆಗಳಿಗೆ ಸ್ಮರಣಿಕೆ ಹಾಗೂ ಸದ್ಯಸರಿಗೆ ಟಿ- ಶರ್ಟ್, ಕ್ಯಾಪ್ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಗುಂಪು ಹಾಗೂ ವೈಯಕ್ತಿಕ ಸ್ಪರ್ದೆಗಳಿವೆ.
ಕ್ರೀಡೆ ಮತ್ತು 5 ವೈಯಕ್ತಿಕ ಕ್ರೀಡೆ ಜೊತೆಗೆ 2 ಸಾಂಸ್ಕೃತಿಕ ಸ್ಪರ್ಧೆಗೆ ಅವಕಾಶವಿದೆ. ಸಿಬ್ಬಂದಿಗೆ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಗುಂಪು ಕ್ರೀಡೆ ಹಾಗೂ ಒಂದು ವೈಯಕ್ತಿಕ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶವಿದೆ. ಈ ಸಂದರ್ಭದಲ್ಲಿ ವಿವಿಧ ಮನೋರಂಜನೆಗಳು ಕೂಡ ನಡೆಯಲಿದೆ ಎಂದು ತಿಳಿಸಿದರು.
ದಿನಾಂಕ 28-02-2024 ರ ಒಳಗೆ ನೋಂದಾಯಿಸಲಾದ ಸಂಸ್ಥೆಗಳಿಗೆ ಮಾತ್ರ ಅವಕಾಶವಿದ್ದು, ನಂತರದ ನೊಂದಾವಣಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸಂಘಟಕರು ತಿಳಿಸಿದರು.