ರಾಜ್ಯಕ್ಕೆ ವಂಚಿಸಿದ ಬಿಜೆಪಿ ಜನರ ಪರವಾಗಿ ನಿಲ್ಲುತ್ತಾರಾ? ನೀವೇ ತೀರ್ಮಾನಿಸಿ: ಸಿಎಂ ಸಿದ್ದರಾಮಯ್ಯ

Prasthutha|

ಅರಸೀಕೆರೆ: ರಾಜ್ಯಕ್ಕೆ ವಂಚಿಸಿದ ಬಿಜೆಪಿ, ರಾಜ್ಯಕ್ಕೆ ಆದ ಅನ್ಯಾಯವನ್ನು ಸಮರ್ಥಿಸಿ ಕೇಂದ್ರದ ಪರವಾಗಿ ಮಾತನಾಡುತ್ತಿರುವ ಬಿಜೆಪಿಯವರು ರಾಜ್ಯದ ಜನರ ಪರವಾಗಿ ನಿಲ್ಲುತ್ತಾರಾ ನೀವೇ ತೀರ್ಮಾನಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

- Advertisement -

ಅರಸೀಕೆರೆ ತಾಲ್ಲೂಕಿನ 152 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ , ನಾನಾ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ‌ ನೆರವೇರಿಸಿದರು.

ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ದೇವೇಗೌಡರು  ಈಗ ಬಿಜೆಪಿ ಜತೆ ಕೂಡಿಕೆ ಮಾಡಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ವಿಧಾನ ಪರಿಷತ್ ಗೆ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ನಮ್ಮ ಜನ ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಭರ್ಜರಿಯಾಗಿ ಗೆಲ್ಲಿಸಿದರು. ಬರಲಿರುವ ಲೋಕಸಭಾ ಚುನಾವಣೆಯಲ್ಲೂ ಅವರು ದೋಸ್ತಿಗೆ ಇದೇ ಗತಿ ಆಗಲಿದೆ ಎಂದು ಭವಿಷ್ಯ ನುಡಿದರು.

- Advertisement -

ನಾವು ಅಧಿಕಾರಕ್ಕೆ ಬಂದ ದಿನದಿಂದಲೇ ಚುನಾವಣೆಯಲ್ಲಿ  ಕೊಟ್ಟ ಭರವಸೆಗಳನ್ನು ಈಡೇರಿಸುವ ಕಾರ್ಯ ಶುರು ಮಾಡಿದ್ದೇವೆ. ಎಂಟು ತಿಂಗಳುಗಳಲ್ಲೇ ಐತಿಹಾಸಿಕವಾದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪ್ರತೀ ವರ್ಷ 60000 ಕೋಟಿ ರೂಪಾಯಿಗಳನ್ನು  ತಿಂಗಳ ಕಂತುಗಳಲ್ಲಿ ಜನರ ಜೇಬಿಗೆ ಹಾಕುತ್ತಿದ್ದೇವೆ ಎಂದರು.

ಸಾಸಕ ಶಿವಲಿಂಗೇಗೌಡರು ತಮ್ಮ ಕೆಲಸ ಕಾರ್ಯಗಳಿಂದ ನಿರಂತರವಾಗಿ ಗೆಲ್ಲುತ್ತಾರೆ. ನಾನು ಹಲವು ವರ್ಷಗಳಿಂದ ಶಾಸಕ ಶಿವಲಿಂಗೇಗೌಡರ ಕೆಲಸಗಳನ್ನು ನೋಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಜತೆಗೆ ರಾಜ್ಯದ ಅಭಿವೃದ್ಧಿ ಬಗ್ಗೆ ವಿಧಾನಸಭೆಯಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಾರೆ. ಹೀಗಾಗಿ ಶಿವಲಿಂಗೇಗೌಡರು ಶಾಶ್ವತವಾಗಿ ವಿಧಾನಸಭೆಗೆ ಆರಿಸಿ ಬರಬೇಕು ಎಂದರು.

ಎತ್ತಿನಹೊಳೆ ಯೋಜನೆ ಪರವಾಗಿ ಶಿವಲಿಂಗೇಗೌಡರು ನಿರಂತರವಾಗಿ ಹೋರಾಡುತ್ತಿದ್ದಾರೆ. ನಾವು ಮಾತ್ರ ಮಣ್ಣಿನ ಮಕ್ಕಳು ಎನ್ನುವವರು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದರು. ಯಾರೇ ವಿರೋಧ ಮಾಡಿದರೂ ಎರಡು ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆಯಿಂದ ಕ್ಷೇತ್ರಕ್ಕೆ ನೀರು ಕೊಡುವುದು ಗ್ಯಾರಂಟಿ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡ್ತೀವಿ ಎಂದು, ಇದಕ್ಕಾಗಿ 5300 ಕೋಟಿ ಕೊಡ್ತೀವಿ ಎಂದು ನಿರ್ಮಾ ಸೀತಾರಾಮನ್ ಕೇಂದ್ರ ಬಜೆಟ್ ನಲ್ಲಿ ಮತ್ತು ಬೊಮ್ಮಾಯಿ ಅವರು ರಾಜ್ಯ ಬಜೆಟ್ನಲ್ಲಿ ಘೋಷಿಸಿದರು. ಆದರೆ ಇವತ್ತಿನವರೆಗೂ ಒಂದೇ ಒಂದು ರೂಪಾಯಿಯನ್ನೂ ಕೊಡದೆ ರಾಜ್ಯಕ್ಕೆ ವಂಚಿಸಿದರು. ಇವರು ನಿಮ್ಮ ಪರವಾಗಿ ಇರುವವರಾ? ರಾಜ್ಯದ ಪರವಾಗಿ ನಿಲ್ಲುವವರಾ ಎನ್ನುವುದನ್ನು ನೀವೇ ತೀರ್ಮಾನಿಸಿ ಎಂದು ಜನರಿಗೆ ಕರೆ ನೀಡಿದರು.

ಒಂದು ಕಡೆ ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಬಿಜೆಪಿಯವರು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರು ಬದಲಾಯಿಸಿದ್ದಾರೆ ಎಂದು ಟೀಕಿಸಿದರು.

ಬಾಣಾವರದ ಎರಡೂ ಪಂಚಾಯ್ತಿಗಳನ್ನು ಒಟ್ಟಾಗಿಸಿ ಪಟ್ಟಣ ಪಂಚಾಯ್ತಿ ಮಾಡಿ ಕೊಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು

ಬಾಣಾವಾರಕ್ಕೆ ಆಗಮಿಸಿ ಕನಕ ಭವನ‌ ಉದ್ಘಾಟಿಸಿದ ಬಳಿಕ , ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ‌ ಕೆ.ಎನ್.ರಾಜಣ್ಣ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಡೂರು ಶಾಸಕ ಆನಂದ್ ಸೇರಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಗೋಪಾಲಸ್ವಾಮಿ, ಅರಕಲಗೋಡು ಪ್ರಸನ್ನ ಸೇರಿ ಹಲವು ಮಂದಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.



Join Whatsapp