ಮಂಗಳೂರು: ಎಸ್‌ಡಿಪಿಐ ಉಳ್ಳಾಲ ನಗರ ಸಮಿತಿ ಅಳವಡಿಸಿದ ಪಕ್ಷ ಸಮಾವೇಶದ ಬ್ಯಾನರ್‌ನ್ನು ಕಿಡಿಗೇಡಿಗಳು ಹರಿದ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಕ್ಷದ ಬ್ಯಾನರ್ ಹರಿದು ಹಾಕಿರುವುದಿರ ಹಿಂದಿರುವ “ಕೈ”ವಾಡ ಯಾರದೆಂದು ತಿಳಿಯದವರು ನಾವಲ್ಲ ಎಂದು ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘನಂದಾರಿ ಕೆಲಸ ನಿಮ್ಮ ಜೋಡಣೆಗೆ ಪೂರಕವಾಗಬಹುದೆ ಎಂದು ಕೇಳಿದ ಅವರು, ಈ ಹಿಂದೆ ನೀವು ನಮ್ಮನ್ನು ಎಷ್ಟು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದೀರೋ ಅದರ ಹತ್ತು ಪಟ್ಟು ಹೆಚ್ಚು ನಾವು ಬೆಳವಣಿಗೆ ಕಂಡಿದ್ದೇವೆ. ಇನ್ನು ಮುಂದೆಯೂ ಹಾಗೆಯೇ ಆಗಲಿದೆ, ಕಾದು ನೋಡಿ ಎಂದು ಹೇಳಿದ್ದಾರೆ.
ನಮ್ಮ ಕಚೇರಿಗೆ ಬೀಗ ಜಡಿಸಿದ,ನಮ್ಮ ಕಾರ್ಯಕರ್ತರನ್ನು ಜೈಲಿಗೆ ಅಟ್ಟಲು ಸಂಘಿಗಳೊಂದಿಗೆ ಕರಾರು ಮಾಡಿದವರ ಅನುಯಾಯಿಗಳಿಂದ ಮಾತ್ರ ಉಳ್ಳಾಲದಲ್ಲಿ ಇಂತಹ ನೀಚ ಕೆಲಸವನ್ನು ನಿರೀಕ್ಷೆ ಮಾಡಬಹುದೇ ವಿನಃ ಬೇರೆ ಯಾರಿಂದಲೂ ಅಲ್ಲ ಎಂದು ಸಾಮಾಜಿಕ ಮಾಧ್ಯಮ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಗುರಿ ಮತ್ತು ನಡೆ ಬಹಳ ಸ್ಪಷ್ಟವಾಗಿದೆ, ಗುರಿ ತಲುಪಲು ಇರುವ ದಾರಿಯೂ ಸರಿಯಾಗಿ ಗೊತ್ತಿದೆ. ಆದರೆ ನಿಮ್ಮ ಈ ದ್ವೇಷ ರಾಜಕೀಯವು ಮುಂದೊಂದು ದಿನ ನಿಮಗೆ ಮುಳುವಾಗಲಿದೆ. ನಿಮ್ಮ ರಾಜಕೀಯ ದಾಹಕ್ಕಾಗಿ ಜೈಲಿಗೆ ಕಳಿಸಲ್ಪಟ್ಟರೆ ಅಮಾಯಕರ ಕಣ್ಣೀರು ಪ್ರವಾಹ, ಸುನಾಮಿಯಾಗಿ ನಿಮ್ಮ ಮುಂದೆ ಬರಲಿದೆ ಎಂಬುದು ನೆನಪಿರಲಿ ಎಂದು ಅನ್ವರ್ ಸಾದತ್ ಎಚ್ಚರಿಕೆ ನೀಡಿದ್ದಾರೆ.