ಸಾಯುವ ಮುನ್ನ ಮಗನ ‘ಗೃಹಲಕ್ಷ್ಮಿ’ ಯೋಜನೆಯ ಅಭಯ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Prasthutha|

ಬೆಳಗಾವಿ: ಅನಾರೋಗ್ಯದಿಂದ ವಿಶ್ವನಾಥ್ (34) ಮೃತಪಟ್ಟಿದ್ದು, ಚಿತೆಗೆ ಅಗ್ನಿ ಸ್ಪರ್ಶ ಮಾಡುವಾಗ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಚಿಂತೆ ಮಾಡಬೇಡ ಎಂದು ಮಗ ಹೇಳಿದ್ದ ಮಾತುಗಳನ್ನು ತಾಯಿ ನೀಲವ್ವ ನೆನಪು ಮಾಡಿಕೊಂಡಿದ್ದರು. ಮಗನ ಸಾವಿನ ನೋವಿನ ನಡುವೆಯೂ ತಾಯಿ ನೀಲವ್ವ ಆಡಿದ್ದ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿತ್ತು.

- Advertisement -

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘಟನೆಯನ್ನು ಗಮನಿಸಿ, ತಾಯಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಒಂದೇ ಗಂಟೆಯಲ್ಲಿ ಒಂದು ವರ್ಷದ ಗೃಹಲಕ್ಷ್ಮಿ ಯೋಜನೆ ಹಣವನ್ನು ತಾಯಿ ಖಾತೆಗೆ ವರ್ಗಾಯಿಸಲಾಗಿತ್ತು. ಈಗ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಈ ಬಡತಾಯಿಯ ಮಗನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ‘ಗೃಹಲಕ್ಷ್ಮಿ ಯೋಜನೆ ದುಡ್ಡು ನಿನಗೆ ಬರುತ್ತೆ, ನಾನಿಲ್ಲ ಎಂದು ಚಿಂತಿಸಬೇಡ’ ಎಂದು ಮಗನ ಮಾತನ್ನು ನೆನಪು ಮಾಡಿಕೊಂಡು ಆತನ ಶವದೆದುರು ತಾಯಿ ರೋದಿಸುತ್ತಿರುವುದನ್ನು ನೋಡಿ ಎದೆ ಭಾರವಾಯಿತು. ಯಾವ ತಾಯಿಗೂ ಎದೆಯೆತ್ತರಕ್ಕೆ ಬೆಳೆದ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡುವ ಸ್ಥಿತಿ ಬಾರದಿರಲಿ ಎಂದು ಮರುಕ ವ್ಯಕ್ತಪಡಿಸಿದ್ದಾರೆ. ನಾವು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ ದಿನದಿಂದ ಇಂದಿನವರೆಗೆ ಕೆಲವರಿಂದ ಅಪಪ್ರಚಾರ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಲೇ ಇದೆ, ಇದಾವುದಕ್ಕೂ ನಾನು ತಲೆಕೆಡಿಕೊಂಡಿಲ್ಲ. ಕಾರಣ ಇಂತಹ ಲಕ್ಷಾಂತರ ಬಡತಾಯಂದಿರಿಗೆ ನಮ್ಮ ಯೋಜನೆ ಮೂರು ಹೊತ್ತು ನೆಮ್ಮದಿಯ ಅನ್ನ ನೀಡಿ ಬದುಕಿಗೆ ಆಧಾರವಾಗಿದೆ ಎಂದು ಹೇಳಿದ್ದಾರೆ. ಬಡತನ, ಹಸಿವು, ಅನಾಥಭಾವ ಅನುಭವಿಸಿದವರಿಗಷ್ಟೇ ಅದರ ನೋವು, ಹತಾಶೆ ಅರಿವಾಗಲು ಸಾಧ್ಯ. ಈ ತಾಯಿಯ ಜೊತೆ ನಮ್ಮ ಸರ್ಕಾರ ಇದೆ, ಮಗನ ಸಾವಿನ ದುಃಖದಿಂದ ಆದಷ್ಟು ಬೇಗ ಹೊರಬರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.



Join Whatsapp