ಇಂಫಾಲ್: ಚುರಚಾಂದ್ ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗಲಭೆ ನಡೆದಿದ್ದು, ಕಿಡಿಗೇಡಿಗಳು ಎಸ್ ಪಿ ಕಚೇರಿ ಹಾಗೂ ಡೆಪ್ಯುಟಿ ಕಮಿಷನರ್ ಕಚೇರಿಗೆ ನುಗ್ಗಿ, ಸಾರ್ವಜನಿಕ ಆಸ್ತಿ ನಾಶಮಾಡಿದ್ದಾರೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಎಸ್ಪಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿದೆ. ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಾಜ ವಿರೋಧಿ ಶಕ್ತಿಗಳು ತಿರುಚಿದ ಚಿತ್ರಗಳು, ವಿಡಿಯೊಗಳು ಮತ್ತು ಪೋಸ್ಟ್ ಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವ ಆತಂಕವಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಪ್ರಚೋದನಕಾರಿ ಮತ್ತು ಸುಳ್ಳು ಮಾಹಿತಿಯಿಂದ ಪ್ರಾಣಹಾನಿ, ಸಾರ್ವಜನಿಕ ಆಸ್ತಿ ನಾಶ, ಸಾಮಾಜಿಕ ಶಾಂತಿ ಭಂಗ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗಬಹುದು. ಹೀಗಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಮಣಿಪುರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.