ಬೆಂಗಳೂರು: ಸ್ಪೀಕರ್ ಯು.ಟಿ. ಖಾದರ್ ಅವರ ಓಡಾಟಕ್ಕೆ ಹೊಸ ಮಾದರಿಯ ಐಷಾರಾಮಿ ಫಾರ್ಚೂನರ್ ಕಾರು ಖರೀದಿಸಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ದುಂದುವೆಚ್ಚಗಳನ್ನು ಕಡಿಮೆ ಮಾಡಿ, ಇರುವ ವಾಹನವನ್ನೇ ಮಾರ್ಪಾಡು ಮಾಡಿಕೊಂಡು ಬಳಸಿ ಬೊಕ್ಕಸಕ್ಕೆ ಹೊರೆಯಾಗದೆ ಇರುವ ಹಾಗೆ ಮಾಡಿ ಮೇಲ್ಪಂಕ್ತಿ ಹಾಕಿಕೊಡಬೇಕಾಗಿದ್ದ ಸಭಾಧ್ಯಕ್ಷರು ಐಷಾರಾಮಿ ಕಾರನ್ನು ಖರೀದಿ ಮಾಡುವ ಅವಶ್ಯವಿರಲಿಲ್ಲ’ ಎಂದು ಹೇಳಿದ್ದಾರೆ.
‘ರಾಜ್ಯ ಭೀಕರ ಬರದಿಂದ ಕಂಗೆಟ್ಟಿರುವ ಸಂದರ್ಭದಲ್ಲಿ 223 ತಾಲೂಕುಗಳು ಬರ ಪೀಡಿತವೆಂದು ಸರ್ಕಾರವೇ ಘೋಷಣೆ ಮಾಡಿರುವಾಗ ಈ ರೀತಿಯಾದ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಬೇಕಿತ್ತು’ ಎಂದು ಬರೆದುಕೊಂಡಿದ್ದಾರೆ.