ಮಂಗಳೂರು ಕಣ್ಣೂರಿನಲ್ಲಿ ನಡೆದಂತಹ ಎನ್ ಆರ್ ಸಿ, ಸಿ ಎ ಎ (NRC, CAA) ಪ್ರತಿಭಟನೆ ಸಂದರ್ಭ ಪ್ರಕರಣ ದಾಖಲಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಏಳನೇ ಜೆ ಎಂ ಎಫ್ ಸಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಉಸ್ಮಾನ್ ಮತ್ತು ಸಿರಾಜ್ ದೋಷಮುಕ್ತಗೊಂಡವರು.
ಬಸ್ಸಿನ ಮೇಲೆ ಹತ್ತಿ ರಾಷ್ಟ್ರೀಯ ನಾಯಕರ ರಾಜ್ಯ ನಾಯಕರ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ಮಾಡಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಬೆನ್ನಲ್ಲೇ ಉಸ್ಮಾನ್ ಮತ್ತು ಸಿರಾಜ್ ಎಂಬುವರ ವಿರುದ್ಧ ಕಂಕನಾಡಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಬಳಿಕ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಇದರ ತನಿಖೆಯನ್ನು ಕೈಗೊಂಡ ಮಂಗಳೂರಿನ ಏಳನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ H.J. ಶಿಲ್ಪಾ, ಆರೋಪಿಗಳ ವಿರುದ್ಧ ದೋಷಾರೋಪಣವನ್ನು ಸಾಬೀತುಪಡಿಸಲು ಪ್ರೊಸುಕ್ಯುಷನ್ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿ ಆರೋಪಿತರನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರ್ ಇದರ ವಕೀಲ ಓಮರ್ ಫಾರೂಕ್ ಮುಲ್ಕಿ, ಐ.ಎಂ ಇಜಾಝ್ ಅಹ್ಮದ್ ಉಳ್ಳಾಲ, ಹೈದರ್ ಅಲಿ ಕಿನ್ನಿಗೋಳಿ, ತೌಸಿಫ್ ಸಚರಿಪೇಟೆ ವಾದಿಸಿದರು.