ಮುಂಬೈ: ಮಹಾರಾಷ್ಟ್ರದಿಂದ ಸಂಗ್ರಹವಾದ ತೆರಿಗೆಯಲ್ಲಿ ಶೇ 50ರಷ್ಟನ್ನು ಕೇಂದ್ರ ಸರ್ಕಾರ ವಾಪಸ್ ಮಾಡಬೇಕು ಎಂದು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
‘ಮಹಾರಾಷ್ಟ್ರ ₹ 1 ಅನ್ನು ನೀಡುತ್ತಿದೆ ಎಂದರೆ, ರಾಜ್ಯದ ಅಭಿವೃದ್ಧಿಗಾಗಿ ಅದರಲ್ಲಿ ಅರ್ಧದಷ್ಟನ್ನು ವಾಪಸ್ ಮಾಡಿ. ನೀವು (ಕೇಂದ್ರ ಸರ್ಕಾರ) ನಮ್ಮ ರಾಜ್ಯವನ್ನು ಲೂಟಿ ಮಾಡುತ್ತಿದ್ದೀರಿ. ನಾವು (ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ) ಅಧಿಕಾರಕ್ಕೇರಿದರೆ, ಮಹಾರಾಷ್ಟ್ರದ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಿನ ತೆರಿಗೆ ಹಂಚಿಕೆ ಸೂತ್ರವನ್ನು ಬದಲಿಸುವ ಭರವಸೆ ನೀಡುತ್ತೇನೆ’ ಎಂದು ಹೇಳಿದ್ದಾರೆ.