ಎಲ್ಲಾ ವರ್ಗದ ಜನರಿಗೆ ಅನುಕೂಲ ಒದಗಿಸುವ ಪ್ರಣಾಳಿಕೆ ಮಾಡುತ್ತೇವೆ: ಡಿಕೆಶಿ

Prasthutha|

ಬೆಂಗಳೂರು: ದೇಶದ ಭದ್ರತೆ, ಎಲ್ಲಾ ವರ್ಗದ ಜನರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪ್ರಣಾಳಿಕೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -


ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಇಂದು ಪಕ್ಷದ ಪ್ರಣಾಳಿಕೆ ಸಮಿತಿ ಸಭೆ ನಡೆಸಿದ್ದೇವೆ. ಜನರ, ಸಂಘ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ. ವಿಧಾನಸಭೆಯ ವೇಳೆ ರಾಜ್ಯದ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿಯಾಗಿದೆ. ಏನು ಕಾರ್ಯರೂಪಕ್ಕೆ ತರಲು ಸಾಧ್ಯ, ಅದನ್ನ ಮಾತ್ರ ನಾವು ಮಾಡ್ತೀವಿ. ಭಾವನೆ ಬಿಟ್ಟು ಬದುಕಿನ ಬಗ್ಗೆ ಹೋಗಬೇಕು, ಇದು ನಮ್ಮ ಕಾಂಗ್ರೆಸ್ ಪಕ್ಷದ ಚಿಂತನೆ. ಪ್ರತಿಯೊಬ್ಬ ರೈತನ ಭದ್ರತೆಯ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಬಡವರಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಉತ್ತೇಜನ ನೀಡುವ ಯಾವುದೇ ಕಾರ್ಯಕ್ರಮಗಳಿದ್ದರೂ ಅವುಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ನಾವು ಕಳೆದ ಚುನಾವಣೆ ಸಮಯದಲ್ಲಿ ನ್ಯಾಯ್ ಯೋಜನೆ ಪರಿಚಯಿಸಿದ್ದರು. ನಾವು ಅದರ ಆಧಾರದ ಮೇಲೆ ಕೆಲವು ಕಾರ್ಯಕ್ರಮ ರೂಪಿಸಿದೆವು. ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸುವಾಗ ಗೃಹಜ್ಯೋತಿ ಯೋಜನೆ ಘೋಷಣೆ ಮಾಡುವಾಗ ಆರಂಭದಲ್ಲಿ 300 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲು ನಾನು, ಸಿದ್ದರಾಮಯ್ಯನವರು ಹಾಗೂ ಸುರ್ಜೆವಾಲ ಅವರು ತೀರ್ಮಾನಿಸಿದ್ದೆವು. ನಾನು ಇಂಧನ ಇಲಾಖೆ ಸಚಿವನಾಗಿದ್ದ ಕಾರಣ, ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದಾಗ, ಈ ಯೋಜನೆ ಪ್ರಕಟಿಸುವ ದಿನ ಬೆಳಗಿನ ಜಾವ ಅದನ್ನು 200 ಯೂನಿಟ್ ಗೆ ಇಳಿಸಲಾಯಿತು. ಈಗ ಮೋದಿ ಅವರು ಸೋಲಾರ್ ಪ್ಯಾನಲ್ ಗಳ ಮೂಲಕ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.

- Advertisement -

ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಆರ್ಥಿಕತೆ ಹಾಳಾಗಲಿದೆ ಎಂದು ಹೇಳುತ್ತಿದ್ದವರು ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ಪ್ರಕಟಿಸಿದರು. ನಾವು ನಮ್ಮ ಜನರ ಬದುಕಿನಲ್ಲಿ ಬದಲಾವಣೆ ತರುವುದು ಮುಖ್ಯ. ನಮ್ಮ ಯೋಜನೆಗಳಿಂದ ವಿದ್ಯುತ್ ಬಿಲ್ ನಲ್ಲಿ 1500, ಗೃಹಲಕ್ಷ್ಮಿ ಯೋಜನೆಯಲ್ಲಿ 2000, ಶಕ್ತಿ ಯೋಜನೆಯಲ್ಲಿ 3000 ಹಣ ಉಳಿಯುತ್ತದೆ. ನಮ್ಮ ಐದು ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಸುಮಾರು 5-6 ಸಾವಿರ ಪ್ರತಿ ತಿಂಗಳು ಉಳಿತಾಯವಾಗಲಿದೆ.

ನಮ್ಮ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವಾಸ್ತವಾಂಶಕ್ಕೆ ಹತ್ತಿರವಾಗುವಂತೆ ಸಲಹೆ ನೀಡಬೇಕು. ಇಂದು ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ನಾವು ಲೆಕ್ಕಾಚಾರ ಹಾಕಲು ಆರಂಭಿಸಿದ ನಂತರ ಬೇರೆ ರಾಜ್ಯಗಳು ತಮಗಾಗಿರುವ ಅನ್ಯಾಯ ಪ್ರಶ್ನಿಸುತ್ತಿದ್ದಾರೆ. ನಿರ್ಮಲಾ ಸೀತರಾಮನ್ ಅವರು ಹಣಕಾಸು ಆಯೋಗದ ಕಡೆ ಬೆಟ್ಟು ಮಾಡಿ ತೋರುತ್ತಿದ್ದಾರೆ. ಹಣಕಾಸು ಆಯೋಗ ಬಜೆಟ್ ಮಂಡನೆ ಮಾಡುವುದಿಲ್ಲ ಅಲ್ಲವೇ? ಸರ್ಕಾರ ಬಜೆಟ್ ಮಂಡನೆ ಮಾಡುವಾಗ, ರಾಜ್ಯಕ್ಕೆ ಆಗುವ ಅನ್ಯಾಯ ಸರಿಪಡಿಸಬಹುದಲ್ಲವೇ?

ನಮ್ಮ ರಾಜ್ಯದಲ್ಲಿ ನಾಗ್ಪುರ ಶಿಕ್ಷಣ ನೀತಿಯನ್ನು ತೆಗೆದುಹಾಕಲು ಮುಂದಾಗಿದ್ದೇವೆ. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಬಿಜೆಪಿ ಸ್ನೇಹಿತರ ಬಳಿಯೇ ನಾನು ಚರ್ಚೆ ಮಾಡಿದ್ದೇನೆ. ಈ ಎನ್ಇಪಿ ಜಾರಿ ಅಸಾಧ್ಯ ಎಂದು ಅವರೇ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ರಾಜ್ಯಗಳಲ್ಲಿ ಜಾರಿ ಮಾಡಲಾಗದನ್ನು ನಮ್ಮ ರಾಜ್ಯದಲ್ಲಿ ಆತುರದಲ್ಲಿ ಜಾರಿ ಮಾಡಲು ಮುಂದಾದರು. ಇದನ್ನು ಸರಿಪಡಿಸಲು ಸಮಿತಿ ರಚಿಸಲಾಗಿದೆ. ಇದೆಲ್ಲದರ ಜವಾಬ್ದಾರಿಯನ್ನು ಸಚಿವ ಸುಧಾಕರ್ ಅವರ ಹೆಗಲಿಗೆ ನೀಡಲಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆ ವಿಶ್ವದಾದ್ಯಂತ ಪ್ರಶಂಸೆ ಪಡೆದಿದೆ. ಈ ಕಾರಣಕ್ಕೆ ಪ್ರಪಂಚದ ಪ್ರಮುಖ 500 ಕಂಪನಿಗಳಲ್ಲಿ ಭಾರತೀಯರೇ ಹೆಚ್ಚು ನಿಯಂತ್ರಣ ಹೊಂದಿದ್ದಾರೆ ಎಂದರು.



Join Whatsapp