‘ಕೊಂಕಣಿ ಸಾಹಿತ್ಯ ಅಕಾಡೆಮಿ’ ಹುದ್ದೆಗಳನ್ನು ಮಾರಾಟ ಮಾಡಬೇಡಿ, ಅರ್ಹರನ್ನೇ ನೇಮಕ ಮಾಡಿ’: ಆಲ್ವಿನ್ ಮೆಂಡೋನ್ಸಾ ಪತ್ರ

Prasthutha|

ಬೆಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗಾಡಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ನೇಮಕ ಮಾಡುವ ಪ್ರಯತ್ನ ರಾಜಕೀಯ ನಾಯಕರಿಂದ ನಡೆಯುತ್ತಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಶಕ್ತಿ ತುಂಬುವ ಅಕಾಡೆಮಿಗೆ ಸಾರಸ್ವತ ಕ್ಷೇತ್ರಗಳ ಪ್ರಮುಖರನ್ನೇ ನೇಮಕ ಮಾಡಬೇಕೆಂದು ಒತ್ತಾಯಿಸಿ ಪತ್ರಕರ್ತರೂ ಆದ ಆಲ್ವಿನ್ ಮೆಂಡೋನ್ಸಾ ಅವರು ಮುಖ್ಯಮಂತ್ರಿ ಹಾಗೂ ಕನ್ನಡ ಸಂಸ್ಕೃತಿ ಸಚಿವರಿಗೆ ಪತ್ರ ಬರೆದಿದ್ದಾರೆ.

- Advertisement -

ಬಹು ಭಾಷೆಗಳ ಸಮುದಾಯಗಳನ್ನು ಹೊಂದಿರುವ ಕರ್ನಾಟಕದಲ್ಲಿ ಬಹುತೇಕ ಭಾಷೆಗಳ ಕ್ಷೇತ್ರಗಳ ಅಭಿವೃದ್ದಿಗಾಗಿ ಅಕಾಡೆಮಿಗಳನ್ನು ಸ್ಥಾಪಿಸಿರುವ ರಾಜ್ಯ ಸರ್ಕಾರ, ಈ ಅಕಾಡೆಮಿಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅನುದಾನದ ಮೊತ್ತವನ್ನು ಹೆಚ್ಚಿಸುವ ಮೂಲಕ ಅತ್ಯುತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಾಹಿತ್ಯ ಅಕಾಡೆಮಿಗಳಿಗೆ ಅನುಕೂಲ ಕಲ್ಪಿಸಿದೆ. ಆದರೆ ಈ ವ್ಯವಸ್ಥೆಯ ಲಾಭ ಪಡೆಯಲು ರಿಯಲ್ ಎಸ್ಟೇಟ್’ನಂತಹಾ ಉದ್ಯಮ ಕ್ಷೇತ್ರದ ಪ್ರಭಾವಿಗಳು ಮುಂದಾಗಿದ್ದಾರೆಂಬ ಮಾತುಗಳು ಸಾಹಿತ್ಯ ಕ್ಷೇತ್ರದಲ್ಲಿ ಕೇಳಿಬರುತ್ತಿದ್ದು, ಅಂತಹಾ ತಪ್ಪಿಗೆ ಅವಕಾಶ ನೀಎಡಬಾರದೆಂದು ಆಲ್ವಿನ್ ಅವರು ಈ ಪತ್ರದಲ್ಲಿ ಸಲಹೆ ಮಾಡಿದ್ದಾರೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ವಿವಿಧ ಭಾಷಾ ಅಕಾಡೆಮಿಗಳ ರೀತಿಯಲ್ಲೇ, ಕರಾವಳಿ ಮಲೆನಾಡು ಸಹಿತ ರಾಜ್ಯದ ಹಲವೆಡೆ ಇರುವ ಕೊಂಕಣಿ ಭಾಷಾ ಸಾಹಿತ್ಯಾಸಕ್ತರ ಆಕಾಂಕ್ಷೆಗೆ ತಕ್ಕಂತೆಯೇ ಕರ್ನಾಟಕ ರಾಜ್ಯ ಕೊಂಕಣಿ ಆಕಾಡೆಮಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿರುತ್ತದೆ. ಕಳೆದ ಹಲವಾರು ವರ್ಷಗಳಿಂದ ಈ ಅಕಾಡೆಮಿ ಕಾರ್ಯಾಚರಿಸುತ್ತಿದ್ದು, ಸಮರ್ಥ ಅಧ್ಯಕ್ಷರ ನೇಮಕವಾಗದಿರುವುದರಿಂದಾಗಿ ಕೊಂಕಣಿ ಆಕಾಡೆಮಿ ತನ್ನ ಆಶೋತ್ತರಗಳನ್ನು ಈಡೇರಿಸಲು ಶಕ್ತವಾಗಿಲ್ಲ ಎಂಬುದು ದುರಾದೃಷ್ಟಕರ ಎಂದು ಅವರು ಸರ್ಕಾರದ ಗಮನಸೆಳೆದಿದ್ದಾರೆ.



Join Whatsapp