ನನ್ನ ಮಾತು ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಡಿಕೆ ಸುರೇಶ್

Prasthutha|

ಬೆಂಗಳೂರು: ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ನಾನು ಮಾತನಾಡಿದ್ದೆ. ಉತ್ತರ ಪ್ರದೇಶಕ್ಕೆ 33% ರಷ್ಟು ಹಣವನ್ನು ನೀಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ತೆರಿಗೆಯ ಹಣವನ್ನು ವಾಪಸ್ ಕೊಡಿ ಎಂದು ಪ್ರಶ್ನೆ ಮಾಡಿದ್ದು ಹೇಗೆ ತಪ್ಪಾಗುತ್ತದೆ? ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದೆ. 224 ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಆಗಿದೆ. ಆದರೂ ಸಹ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ನಾನು ಮಾತನಾಡಿದ್ದೇನೆ. ಅದರಲ್ಲಿ ಯಾವುದೇ ಹಿಂಪಡೆಯುವ ಪ್ರಶ್ನೆ ಇಲ್ಲ. ನಾಡಿನ ಹಿತಕ್ಕೋಸ್ಕರ ನನ್ನ ಹೋರಾಟ ಎಂದು ಸಂಸದ ಡಿಕೆ ಸುರೇಶ್ ಸ್ಪಷ್ಟಪಡಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನನ್ನ ಧರ್ಮ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಈ ಅನ್ಯಾಯ ಹೀಗೆ ಮುಂದುವರೆದರೆ, ಪ್ರತ್ಯೇಕದ ಕೂಗು ಈಗಾಗಲೇ ಎಲ್ಲ ಕಡೆ ಬಂದಿದೆ ಎಂದು ನಾನು ಹೇಳಿದ್ದೇನೆ ಎಂದು ಹೇಳಿದ್ದಾರೆ.

ಬಿಜೆಪಿಯವರು ನನ್ನ ವಿರುದ್ಧ ಯಾವುದೇ ಠಾಣೆಯಲ್ಲಿ ಬೇಕಾದರೂ ದೂರನ್ನು ನೀಡಲಿ. ನಾನು ಹೋರಾಟ ಮಾಡಲು ಸಿದ್ಧನಿದ್ದೇನೆ. ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನು ಕ್ಷಣಮಾತ್ರದಲ್ಲಿ ಬದಲಾವಣೆ ಮಾಡುವ ಬಿಜೆಪಿಯವರಿಗೆ ಅಭಿವೃದ್ಧಿಯ ವಿಚಾರದಲ್ಲಿ ಸರಿಯಾದ ಹಿತಾಸಕ್ತಿ ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

- Advertisement -

ನಿಮಗೆ ಬೇಕಾದಾಗ ಹೇಗೆ ಬೇಕಾದರೂ ಆಡಳಿತವನ್ನು ಮಾಡುತ್ತೀರಿ. ನನ್ನ ವಿರುದ್ಧ ಕೇಸ್ ಹಾಕಬೇಕು, ಅಮಾನತು ಮಾಡಬೇಕು ಎನ್ನುವುದು ನಿಮ್ಮ ಉದ್ದೇಶ ಆಗಿದ್ದು ನನ್ನ ಹಾಗೂ ದಕ್ಷಿಣ ಭಾರತದ ಜನರ ಪರ ನಾನು ಮಾತನಾಡಿದ್ದೇನೆ. ಇದನ್ನು ತಪ್ಪು ಎನ್ನುವ ಬಿಜೆಪಿಯವರು ಡೋಂಗಿ ಹಿಂದುತ್ವವಾದಿಗಳು. ಡೋಂಗಿ ಹಿಂದುತ್ವ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೀರಿ. ಬಜೆಟ್‌ನಲ್ಲಿ ನಿಮಗೆ ದೇಶಕ್ಕೋಸ್ಕರ ಏನನ್ನೂ ಕೊಡಲು ಸಾಧ್ಯ ಆಗಿಲ್ಲ. ಇದನ್ನು ಮುಚ್ಚಿಕೊಳ್ಳಲು ನನ್ನ ಹೇಳಿಕೆಯನ್ನು ತಿರುಚಿ ರಾಜಕಾರಣ ಮಾಡಲಾಗುತ್ತಿದೆ ಎಂದು ಡಿಕೆ ಸುರೇಶ್ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.



Join Whatsapp