ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಎಕ್ಸ್ ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡವರು ಈಗ ಬಿಬಿಎಂಪಿಯನ್ನ ಬ್ರಹ್ಮಾಂಡ ಬ್ರಷ್ಟಾಚಾರದ ಕೂಪವಾಗಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹದಲ್ಲಿ ನಡೆದಿರುವ ಅಕ್ರಮವನ್ನು ಬಯಲಿಗೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದ ತನಿಖಾ ಸಮಿತಿ ರಚಿಸಬೇಕು. ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ಕಳಿಸಿ ದಂಡ ಸಮೇತ ತೆರಿಗೆ ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಬಿಬಿಎಂಪಿ ತೆರಿಗೆ ಸಗ್ರಹದಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ಗೊತ್ತಾಗಿದ್ದು, ವಲಯಾಧಿಕಾರಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ಗೆ ಶಿಫಾರಸು ಮಾಡಿದ್ದಾರೆ. ಇದರ ಬೆನ್ನಲ್ಲೇ ಆರ್ ಅಶೋಕ ವಾಗ್ದಾಳಿ ನಡೆಸಿದ್ದಾರೆ.