ಚೆನ್ನೈ: ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ತಮಿಳಗ ವೆಟ್ರಿ ಕಳಗಂ ಎಂದು ಪಕ್ಷಕ್ಕೆ ನಾಮಕರಣ ಮಾಡಿದ್ದಾರೆ.
ಇದು ತಮಿಳುನಾಡಿನ ಸಿನಿಮಾ ಹಾಗೂ ರಾಜಕೀಯದಲ್ಲಿ ಹೊಸ ತಿರುವು ತರಲಿದೆ ಎಂದು ಭಾವಿಸಲಾಗಿದೆ.
ʼತಮಿಳ ವೆಟ್ರಿ ಕಳಗಂʼ ನಾಯಕರು ತಮ್ಮನ್ನು ಪಕ್ಷದ ಮುಖ್ಯಸ್ಥನನ್ನಾಗಿ ನೇಮಕ ಮಾಡಿದ ನಂತರ ವಿಜಯ್ ಆ ಪಕ್ಷಕ್ಕೆ ತಮಿಳುನಾಡಿನಲ್ಲಿ ಚಾಲನೆ ನೀಡಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಅವರು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ತಮ್ಮ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ತಮಿಳ ವೆಟ್ರಿ ಕಳಗಂ ಇನ್ನಿತರ ಯಾವುದೇ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಎಂದು ಇತ್ತೀಚೆಗೆ ನಡೆದ ಸಾಮಾನ್ಯ ಮಂಡಳಿ ಹಾಗೂ ಕಾರ್ಯಕಾರಿ ಮಂಡಳಿ ಸಭೆಗಳಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಟ ವಿಜಯ್ ತಮಿಳುನಾಡು ಮತ್ತು ಕೇರಳದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಹಲವಾರು ಸಾರ್ವಜನಿಕ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.