ರಾಮನಗರ: ‘ರಾಜ್ಯದ ಜನರಿಗೆ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ದೊರೆಯದಿದ್ದರೆ ಎಲ್ಲ ಗ್ಯಾರಂಟಿಗಳನ್ನು ರದ್ದು ಮಾಡುವುದೇ ಬೆಸ್ಟ್. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರಿಗ ಹೇಳಿದ್ದೇನೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ತಾಲ್ಲೂಕಿನ ಶ್ರೀಗಿರಿಪುರದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಬಾಲಕೃಷ್ಣ, ಬಿಜೆಪಿಯ ಧರ್ಮ ರಾಜಕಾರಣದ ಮಂತ್ರಾಕ್ಷತೆ ಬೇಕೋ ಅಥವಾ ಜನಸಾಮಾನ್ಯರ ಜೀವನ ಬದಲಿಸುತ್ತಿರುವ ಕಾಂಗ್ರೆಸ್ನ ಗ್ಯಾರಂಟಿ ಬೇಕೊ ಎಂದು ಜನ ಈ ಚುನಾವಣೆಯಲ್ಲಿ ತೀರ್ಮಾನ ಮಾಡಬೇಕು ಎಂದು ಕರೆ ನೀಡಿದ್ದಾರೆ.
ನಾವೆಲ್ಲರೂ ಹಿಂದೂಗಳೇ. ಆದರೆ ದೇವರು ಮತ್ತು ದೇವಸ್ಥಾನದ ಹೆಸರಿನಲ್ಲಿ ರಾಜಕಾರಣ ಮಾಡಿ ಮತ ಪಡೆಯೋದು ಸರಿಯಲ್ಲ. ಹಾಗಾಗಿ, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಅವುಗಳ ಆಧಾರದ ಮೇಲೆಯೇ ಜನರ ಬಳಿ ಮತ ಕೇಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವೇನಾದರೂ ಕಡಿಮೆ ಸ್ಥಾನ ಗಳಿಸಿದರೆ, ಜನ ಗ್ಯಾರಂಟಿಗಳನ್ನು ತಿರಸ್ಕರಿಸಿದ್ದಾರೆ ಎಂದರ್ಥ. ಆಗ, ಅವುಗಳನ್ನು ರದ್ದು ಮಾಡಿ ನಾವೂ ಅವರಂತೆ ಮಂದಿರದ ರಾಜಕಾರಣ ಮಾಡಬೇಕಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ.