ಬೆಂಗಳೂರು : ಹೆಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ಬಹುತೇಕ ವಿಲೀನ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಮಂಗಳವಾರ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರ ಜತೆ ಪ್ರತಿಭಟನೆ ಮಾಡಿದ್ದಾರೆ.ಇದು ಅವರ ಪಕ್ಷದ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಅವರು ಯಾವ ಬಣ್ಣದ ಶಾಲನ್ನಾದರೂ ಧರಿಸಲಿ. ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲ. ಅಲ್ಲಿ ನೆಲೆ ಕಂಡುಕೊಳ್ಳಲು ಇವರಿಬ್ಬರಲ್ಲಿ ಯಾರು ಯಾರನ್ನು ನುಂಗುತ್ತಾರೋ ಗೊತ್ತಿಲ್ಲ ಎಂದರು.
ಮಂಡ್ಯದಲ್ಲಿ ಕೇಸರಿ ಧ್ವಜದ ವಿವಾದದ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡಿದ್ದಾರೆ, ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಭಾಗದ ಎಲ್ಲಾ ಜಾತಿ ಹಾಗೂ ಧರ್ಮದ ಜನರು ಬಹಳ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ನಮ್ಮ ಕಡೆ ಊರ ಹಬ್ಬ ಮಾಡುವಾಗ ಯಾವರೀತಿ ಮಾಡುತ್ತಾರೆ ಎಂದು ನೀವು ನೋಡಿದ್ದೀರಲ್ಲಾ? ಈಗ ಅವರು ಹೊಸ ಪ್ರಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.