ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸುಡುಮದ್ದು ತಯಾರಿಕಾ ಘಟಕ ಅಮಾನತು

Prasthutha|

ಮಂಗಳೂರು: ಕುಕ್ಕೇಡಿ ಗ್ರಾಮದ ಕುಡ್ತ್ಯಾರುವಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಮೂವರು ಕಾರ್ಮಿಕರು ಭಾನುವಾರ ಮೃತಪಟ್ಟಿದ್ದರು‌. ಈ ಸಂಬಂಧವಾಗಿ ಜಿಲ್ಲೆಯಲ್ಲಿರುವ ಎಲ್ಲ ಸುಡುಮದ್ದು ತಯಾರಿಕಾ ಘಟಕಗಳನ್ನು ಅಮಾನತು ಮಾಡಿ ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಆದೇಶ ಹೊರಡಿಸಿದ್ದಾರೆ.

- Advertisement -

ಅನಧಿಕೃತವಾಗಿ ಪಟಾಕಿ ವ್ಯವಹಾರ ನಡೆಸುವುದನ್ನು ನಿಯಂತ್ರಿಸಲು ಪಟಾಕಿ ತಯಾರಿ, ದಾಸ್ತಾನು ಮತ್ತು ಮಾರಾಟದ ಸಂದರ್ಭದಲ್ಲಿ ಅಗ್ನಿ ಅನಾಹುತ ಸಂಭವಿಸುವುದನ್ನು ತಡೆಯಲು ಜಿಲ್ಲಾಡಳಿತ ಆಯಾ ಉಪವಿಭಾಗಾಧಿಕಾರಿ (ಪುತ್ತೂರು/ಮಂಗಳೂರು) ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ.

ಸಮಿತಿಯು ತನ್ನ ವ್ಯಾಪ್ತಿಯ ಎಲ್ಲ ಸುಡುಮದ್ದು ಘಟಕಗಳನ್ನು ಸೀಲ್‌ಡೌನ್‌ ಮಾಡಬೇಕು. ಸುಡುಮದ್ದು ತಯಾರಿಸುವ, ದಾಸ್ತಾನು ಮಾಡುವ ಹಾಗೂ ಮಾರಾಟ ಮಾಡುವ ಎಲ್ಲ ಘಟಕಗಳನ್ನು ಪರಿಶೀಲಿಸಬೇಕು. ಪರಿಶೀಲನೆ ಸಂದರ್ಭ ಜಿಪಿಎಸ್‌ ಆಧರಿತ ಫೋಟೊದ ಜೊತೆ ವರದಿ ನೀಡಬೇಕು. ನಮೂನೆ ಎಲ್‌ಇ-5 ಅಡಿ ಪಡೆದ ಪರವಾನಗಿಗಳನ್ನು, ಅಗ್ನಿಶಾಮಕ ಇಲಾಖೆಯಿಂದ ಪಡೆದ ನಿರಾಕ್ಷೇಪಣಾ ಪತ್ರ ಹಾಗೂ ಅವುಗಳ ವಾಯಿದೆಯನ್ನು, ಘಟಕಗಳಲ್ಲಿ ಅಗ್ನಿಶಾಮಕ ವ್ಯವಸ್ಥೆ ಹೊಂದಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಹಸಿರು ಪಟಾಕಿ ಉತ್ಪಾದಕರು ಅಧಿಕೃತ ಉತ್ಪಾದಕರಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿವೆಯೇ ಎಂದು ಪರಿಶೀಲಿಸಬೇಕು ಎಂದೂ ಜಿಲ್ಲಾಧಿಕಾರಿ ಆದೇಶದಲ್ಲಿ ಹೇಳಿದ್ದಾರೆ

- Advertisement -

ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಪಡೆದ ನಿರಾಕ್ಷೇಪಣಾ ಪತ್ರಗಳನ್ನು ಹಾಜರುಪಡಿಸಿದ ಬಳಿಕವಷ್ಟೇ ಈ ಘಟಕಗಳ ಕಾರ್ಯಾರಂಭದ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಕಚೇರಿಗೆ ಶಿಫಾರಸು ಸಲ್ಲಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ



Join Whatsapp